ಮಡಿಕೇರಿ ಮೇ 19 : ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದಿಂದ ಅಭೂತಪೂರ್ವ ಗೆಲುವಿನೊಂದಿಗೆ ವಿಧಾನಸಭೆ ಪ್ರವೇಶಿಸಿರುವ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಅವರಿಗೆ ನೂತನ ಸರ್ಕಾರದ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದರೊಂದಿಗೆ, ಅವರನ್ನು ಕೊಡಗು ಜಿಲ್ಲಾ ಉಸ್ತುವಾರಿಯನ್ನಾಗಿ ನೇಮಿಸಬೇಕೆಂದು ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಆಗ್ರಹಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ಪ್ರಮುಖರು ಹಾಗೂ ವಿರಾಜಪೇಟೆ ಪುರಸಭೆ ಸದಸ್ಯರಾದ ರಾಜೇಶ್ ಪದ್ಮನಾಭ ಅವರು ಮಾತನಾಡಿ, ಕಳೆದ ಎರಡು ದಶಕಗಳಿಂದ ವಿರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಪ್ರತಿನಿಧಿಯ ಆಯ್ಕೆ ಸಾಧ್ಯವಾಗಿರಲಿಲ್ಲ. ಈ ಬಾರಿ ಕಾಂಗ್ರೆಸ್‍ನಿಂದ ಅಜ್ಜಿಕುಟ್ಟೀರ ಎಸ್.ಪೊನ್ನಣ್ಣ ಅವರು ಆಯ್ಕೆಯಾಗಿದ್ದು, ಇವರಿಗೆ ಯಾವುದೇ ಖಾತೆಯನ್ನು ನೀಡಿದರು ಅದನ್ನು ನಿಭಾಯಿಸುವ ಸಾಮರ್ಥ್ಯವಿದೆ. ಈ ಹಿನ್ನೆಲೆ ಅವರಿಗೆ ಸಚಿವ ಸ್ಥಾನದೊಂದಿಗೆ ಉಸ್ತುವಾರಿಯ ಜವಾಬ್ದಾರಿ ನೀಡಬೇಕೆಂದು ಒತ್ತಾಯಿಸಿದರು.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್‍ನ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷರಾದ ರಫೀಕ್ ಕೋಳುಮಂಡ ಮಾತನಾಡಿ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧವಾಗಿ ಅಲ್ಪಸಂಖ್ಯಾತ ಸಮುದಾಯದ ಪಕ್ಷೇತರ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತ ವಿಭಜನೆ ಮಾಡುವ ಪ್ರಯತ್ನಗಳು ನಡೆಯಿತು. ಆದರೆ, ಪ್ರಬುದ್ಧ ಮತದಾರ ಇಂತಹ ವಿಚಾರಗಳನ್ನು ಮನಗಂಡು, ಕೇವಲ ಕ್ಷೇತ್ರದ ಅಭಿವೃದ್ಧಿಯ ಹಿತದೃಷ್ಟಿಯಿಂದ ಕಾಂಗ್ರೆಸ್‍ಗೆ ಮತ ನೀಡಿರುವುದಾಗಿ ಅಭಿಪ್ರಾಯಿಸಿದರು.
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ನಿತ್ಯೋಪಯೋಗಿ ವಸ್ತುಗಳ ಬೆಲೆಯಿಂದ ಕಂಗಾಲಾದ ಮತದಾರ ಈ ಬಾರಿ ಕಾಂಗ್ರೆಸ್‍ಗೆ ಆಶೀರ್ವಾದ ಮಾಡಿರುವುದಲ್ಲದೆ, ಶಾಂತಿ, ಸಹಬಾಳ್ವೆಯ ಸಮಾಜದ ನಿರ್ಮಾಣಕ್ಕಾಗಿ ಪೊನ್ನಣ್ಣ ಅವರನ್ನು ಬೆಂಬಲಿಸಿರುವುದಾಗಿ ಅಭಿಪ್ರಾಯಿಸಿದರು.
ವಿರಾಜಪೇಟೆ ಬ್ಲಾಕ್ ಪ್ರಚಾರ ಸಮಿತಿ ಅಧ್ಯಕ್ಷ ಪಿ.ಎ.ಅನೀಫ್ ಮಾತನಾಡಿ, ಕಳೆದ ಎರಡೂವರೆ ದಶಕಗಳಿಂದ ಇದ್ದ ಆಡಳಿತದಿಂದ ಬೇಸತ್ತು, ಬದಲಾವಣೆಗಾಗಿ ಜನತೆ ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದ್ದಾರೆ. ಇದೀಗ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕರಿಗೆ ಸಚಿವ ಸ್ಥಾನ ನೀಡುವ ವಿಶ್ವಾಸ ತಮಗಿದೆ. ಈ ಹಿಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಸಂದರ್ಭಗಳಲ್ಲೆಲ್ಲ ಜಿಲ್ಲೆಯ ಜನಪ್ರತಿನಿಧಿಗಳಿಗೆ ಸಚಿವ ಸ್ಥಾನವನ್ನು ನೀಡಿರುವುದಾಗಿ ಅವರು ತಿಳಿಸಿದರು.
ಕಾಂಗ್ರೆಸ್ ಮುಖಂಡ ಶಬರೀಶ್ ಮಾತನಾಡಿ, ಜಿಲ್ಲೆಯ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವಿನ ಬಳಿಕ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ಸಮಾಜವನ್ನು ಒಡೆಯುವ ಮೂಲಕ ವರ್ಗ ಸಂಘರ್ಷವನ್ನು ಮೂಡಿಸುವ ಅನಾರೋಗ್ಯಕರ ಬೆಳವಣಿಗೆಗಳು ನಡೆಯುತ್ತಿವೆ. ಇಂತಹ ಸಮಾಜ ವಿರೋಧಿ ಕ್ರಮಗಳನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ ಅವರು, ಸಮಾಜ ಒಡೆದು ಲಾಭ ಪಡೆಯುವ ಪ್ರಯತ್ನ ನಡೆಸಿದವರಿಗೆ ಈ ಚುನಾವಣೆಯಲ್ಲಿ ಮತದಾರ ತಕ್ಕ ಉತ್ತರ ನೀಡಿರುವುದಾಗಿ ತೀಕ್ಷ್ಣವಾಗಿ ನುಡಿದರು.
ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ಎಂ.ಎಂ. ಇಸ್ಮಾಯಿಲ್, ಡಿಸಿಸಿ ಸದಸ್ಯ ಅಬ್ದುಲ್ ರೆಹಮಾನ್(ಅಂದಾಯಿ) ಉಪಸ್ಥಿತರಿದ್ದರು.