ಮಡಿಕೇರಿ 19 : ವಿಧಾನ ಸಭಾ ಚುನಾವಣೆಯಲ್ಲಿ ಪಕ್ಷಾತೀತ ಬೆಂಬಲ ನೀಡುವ ಮೂಲಕ ರಾಜ್ಯದಲ್ಲಿ ಕಾಂಗ್ರೆಸ್‍ಗೆ ಬಹುಮತ ಬರಲು ಕಾರಣರಾದ ಮುಸ್ಲಿಂ ಸಮುದಾಯಕ್ಕೆ ನೂತನ ಸರ್ಕಾರದಲ್ಲಿ ಐದು ಸಚಿವ ಸ್ಥಾನಗಳನ್ನು ನೀಡಬೇಕೆಂದು ಕರ್ನಾಟಕ ಮುಸ್ಲಿಂ ಯೂನಿಟಿ(ಕೆಎಂಯು) ಸಂಘಟನೆಯ ರಾಜ್ಯ ಸಮಿತಿ ಸದಸ್ಯ ಇಸಾಕ್ ಖಾನ್ ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ನೂತನ ಸರ್ಕಾರದಲ್ಲಿ ಉಪ ಮುಖ್ಯ ಮಂತ್ರಿ ಸ್ಥಾನವನ್ನು ಡಿ.ಕೆ. ಶಿವ ಕುಮಾರ್ ಅವರೊಬ್ಬರಿಗೆ ನೀಡಲು ಪಕ್ಷ ನಿರ್ಧರಿಸಿದೆ, ಈ ಹಿನ್ನೆಲೆ ಮುಸ್ಲಿಂ ಸಮುದಾಯದ ಜನ ಪ್ರತಿನಿಧಿಗಳಿಗೆ ಪ್ರಮುಖವಾದ ಗೃಹ ಇಲಾಖೆ, ಪ್ರೌಢ ಮತ್ತು ಉನ್ನತ ಶಿಕ್ಷಣ, ಕೈಗಾರಿಕಾ ಖಾತೆ ಸೇರಿದಂತೆ ಮೂರು ಖಾತೆಗಳೊಂದಿಗೆ ಐದು ಸಚಿವ ಸ್ಥಾನಗಳನ್ನು ನೀಡಬೇಕೆಂದು ಒತ್ತಾಯಿಸಿದರು.
ಕಳೆದ ಏಳೆಂಟು ದಶಕಗಳಿಂದ ಮುಸ್ಲಿಂ ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದು ಕೊಂಡೇ ಬಂದಿದೆ. ಈ ಬಾರಿ ಇಡೀ ಮುಸ್ಲಿಂ ಸಮುದಾಯ ಕಾಂಗ್ರೆಸ್ ಪಕ್ಷವನ್ನು ಪಕ್ಷಾತೀತವಾಗಿ ಬೆಂಬಲಿಸಿದೆ. ನಮ್ಮ ಅಭಿವೃದ್ಧಿಗೆ ಯಾವುದೇ ‘ಭಾಗ್ಯ’ಗಳು ಬೇಡ, ಸೂಕ್ತ ಅಧಿಕಾರವನ್ನು ನೀಡಿ, ನಮ್ಮ ಅಭಿವೃದ್ಧಿಯನ್ನು ನಾವೇ ಮಾಡಿಕೊಳ್ಳುವುದಾಗಿ ದೃಢವಾಗಿ ನುಡಿದರು.
ಎಂಎಲ್‍ಸಿ ಸ್ಥಾನ ನೀಡಿ- ಕೊಡಗಿನ ಎರಡು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ಪೂರ್ಣ ಬೆಂಬಲವನ್ನು ಮುಸ್ಲಿಂ ಸಮುದಾಯ ನೀಡಿದೆ. ಈ ಹಿನ್ನೆಲೆ ಜಿಲ್ಲೆಯ ನೂತನ ಇಬ್ಬರು ಶಾಸಕರಿಬ್ಬರು ನಮ್ಮ ಸಮುದಾಯದವರೊಬ್ಬರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಒದಗಿಸಲು ಶ್ರಮಿಸಬೇಕೆಂದು ಇಸಾಕ್ ಖಾನ್ ಒತ್ತಾಯಿಸಿದರು.
ಕರ್ನಾಟಕ ಮುಸ್ಲಿಂ ಯೂನಿಟಿಯ ಜಿಲ್ಲಾ ಸದಸ್ಯ ಎ. ಶಬ್ಬಿರ್ ಮಾತನಾಡಿ, ಈ ಚುನಾವಣೆಯಲ್ಲಿ ಮುಸ್ಲಿಂ ಸಮುದಾಯ ಪ್ರಜ್ಞಾ ವಂತಿಕೆಯನ್ನು ಮೆರೆದಿದ್ದು, ಶೇ.90 ಕ್ಕೂ ಹೆಚ್ಚಿನ ಸಮುದಾಯ ಬಾಂಧವರು ಕಾಂಗ್ರೆಸ್‍ಗೆ ಬೇಷರತ್ ಬೆಂಬಲವನ್ನು ನೀಡಿದೆ. ಈ ಹಿನ್ನೆಲೆ ಜಿಲ್ಲೆಯ ಎರಡು ಕ್ಷೇತ್ರಗಳಿಂದ ಆಯ್ಕೆಯಾಗಿರುವ ಶಾಸಕರು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸವಂತಾಗಬೇಕೆಂದು ಅಭಿಪ್ರಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಕೆಎಂಯು ಸಂಘಟನೆಯ ಜಿಲ್ಲಾ ಸದಸ್ಯರಾದ ಎನ್.ಎ.ಇಬ್ರಾಹಿಂ, ಎಂ.ಎಂ.ಖಲಂದರ್, ಎಂ.ಇ.ಇಬ್ರಾಹಿಂ ಉಪಸ್ಥಿತರಿದ್ದರು.