ಮಡಿಕೇರಿ ಮೇ 19 : ಕೊಡಗಿನ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ 125 ಮಂದಿ ರ‍್ಯಾಲಿ ಪಟುಗಳನ್ನು ಒಳಗೊಂಡ ‘ರ‍್ಯಾಲಿ ಆಫ್ ಕೂರ್ಗ್-2023’ ಆಫ್ ರೋಡ್ ಬೈಕ್ ರ‍್ಯಾಲಿಯನ್ನು ಮೇ21 ರಂದು ಆಯೋಜಿಸಲಾಗುತ್ತಿದೆ ಎಂದು ಎಂಆರ್‍ಎಫ್ ರ‍್ಯಾಲಿ ಆಯೋಜಕ ಆಕಾಶ್ ಐತಾಳ್ ಮತ್ತು ತಂಡದ ಪ್ರಮುಖರು ಮಾಹಿತಿ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ರಾಷ್ಟ್ರೀಯ ಚಾಂಪಿಯನ್ ಆಕಾಶ್ ಐತಾಳ್, ಅಂದು ದೇವಸ್ತೂರು ಗ್ರಾಮದ ಖಾಸಗಿ ಕಾಫಿ ತೋಟಗಳ ಮಧ್ಯೆ ದ್ವಿಚಕ್ರ ವಾಹನಗಳ ಆಫ್ ರೋಡ್ ರ‍್ಯಾಲಿ ನಡೆಯಲಿದ್ದು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.
ರ‍್ಯಾಲಿ 9 ವಿಭಾಗಗಳಲ್ಲಿ ನಡೆಯಲಿದ್ದು, ಇದರಲ್ಲಿ ರಾಷ್ಟ್ರದ ಪ್ರಖ್ಯಾತ ರ‍್ಯಾಲಿ ಪಟುಗಳು ಪಾಲ್ಗೊಳ್ಳಲಿದ್ದಾರೆ. ಪ್ರಮುಖವಾಗಿ ಟಿವಿಎಸ್ ರೇಸಿಂಗ್ ತಂಡದಿಂದ ಫಾರಿನ್ ಓಪನ್ ಕ್ಲಾಸ್‍ನಲ್ಲಿ ಆರ್.ಇ ರಾಜೇಂದ್ರ, ಸ್ಯಾಮುಯೆಲ್, ತನ್ವೀರ್ ಅಹಮ್ಮದ್ ಮತ್ತು ಇದೇ ವಿಭಾಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿರುವ ಮಹಿಳಾ ಸ್ಪರ್ಧಿ ಐಶ್ವರ್ಯ ಪಿಸೆ ಅವರು ಪುರುಷರೊಂದಿಗೆ ಸ್ಪರ್ಧಿಸಲಿದ್ದಾರೆ ಎಂದು ಹೇಳಿದರು.
ಓಪನ್ ಕ್ಲಾಸ್‍ನಲ್ಲಿ ಈ ಬಾರಿ 8 ಮಂದಿ ಮಹಿಳಾ ಸ್ಪರ್ಧಿಗಳು ಭಾಗವಹಿಸುತ್ತಿರುವುದು ಈ ಬಾರಿಯ ರ‍್ಯಾಲಿಯ ಆಕರ್ಷಣೆಯಾಗಿದೆ. ಒಟ್ಟಾರೆಯಾಗಿ 80 ಕಿ.ಮೀ. ದೂರವನ್ನು 3 ಸುತ್ತಿನಲ್ಲಿ ಸ್ಪರ್ಧಿಗಳು ಕ್ರಮಿಸಬೇಕಾಗುತ್ತದೆ ಎಂದು ವಿವರಿಸಿದರು.
ಮೇ 21ರಂದು ಬೆಳಗ್ಗೆ 7 ಗಂಟೆಯಿಂಧ ಮಧ್ಯಾಹ್ನ 2 ಗಂಟೆಯವರೆಗೆ ರ‍್ಯಾಲಿ ನಡೆಯಲಿದ್ದು, ಸಂಜೆ ಅಬ್ಬಿಧಾಮದಲ್ಲಿ ಬಹುಮಾನ ವಿತರಣೆ ನಡೆಸಲಾಗುತ್ತದೆ ಎಂದು ಆಕಾಶ್ ಐತಾಳ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕಟ್ಟೆಮನೆ ಸೋನಾಜಿತ್, ಕಟ್ಟೆಮನೆ ರೋಷನ್, ರ‍್ಯಾಲಿಪಟುಗಳಾದ ನಟರಾಜ್, ಜತೀನ್ ಜೈನ್ ಮತ್ತು ಅಮನ್ ಪಾವ್ಡೆ ಉಪಸ್ಥಿತರಿದ್ದರು.