ಮಡಿಕೇರಿ ಮೇ 23 : ವಿರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ನೂತನವಾಗಿ ಆಯ್ಕೆಯಾಗಿರುವ ಶಾಸಕ ಅಜ್ಜಿಕುಟ್ಟೀರ ಪೊನ್ನಣ್ಣ ರಿಗೆ ಸಚಿವ ಸ್ಥಾನ ನೀಡಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಮೇ 25 ರಂದು ಅಖಿಲ ಕೊಡವ ಸಮಾಜದ ಸಭೆ ನಡೆಯಲಿದೆ ಎಂದು ಅಖಿಲ ಕೊಡವ ಸಮಾಜದ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ತಿಳಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಂದು ಬೆಳಗ್ಗೆ 10.30 ಗಂಟೆಗೆ ಕೊಡವ ಜನಾಂಗದ ಮಾತೃ ಸಂಸ್ಥೆಯಾಗಿರುವ ಅಖಿಲ ಕೊಡವ ಸಮಾಜದ ಸಭಾಂಗಣದಲ್ಲಿ ಕೊಡವ ಜನಾಂಗದ ವಿವಿಧ ಸಮಾಜ ಹಾಗೂ ಸಂಘ ಸಂಸ್ಥೆಗಳ ಸಭೆ ಕರೆಯಲಾಗಿದ್ದು, ಕೊಡವ ಜನಾಂಗ ಚುನಾಯಿತ ಪ್ರತಿನಿಧಿಯೊಬ್ಬರಿಗೆ ಸುಧೀರ್ಘ ಅವಧಿಯ ಬಳಿಕ ಸಚಿವ ಸ್ಥಾನ ದೊರಕುವ ಅವಕಾಶವಿದ್ದು, ನಾವೆಲ್ಲರೂ ಪಕ್ಷಬೇಧ ಮರೆತು ಒತ್ತಾಯಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿರುವ ಎಲ್ಲಾ ಕೊಡವ ಸಮಾಜ, ಹಾಗೂ ಕೊಡವ ಸಂಘ ಸಂಸ್ಥೆಗಳ ಪ್ರತಿನಿಧಿಗಳು ತಲಾ ಇಬ್ಬರಂತೆ ಸಭೆಗೆ ಆಗಮಿಸಿ ತಮ್ಮ ತಮ್ಮ ಸಲಹೆ ಸೂಚನೆಗಳನ್ನು ನೀಡುವಂತೆ ಮನವಿ ಮಾಡಿದರು.
ಇದು ಯಾವುದೇ ಒಂದು ರಾಜಕೀಯ ಪಕ್ಷದ ಪರ ಅಥವಾ ವಿರೋಧದ ಸಭೆ ಆಗಿರುವುದಿಲ್ಲ, ಬದಲಾಗಿ ಕೊಡವ ಜನಾಂಗದ ಪ್ರತಿನಿಧಿಯೊಬ್ಬರಿಗೆ ಸಚಿವ ಸ್ಥಾನ ನೀಡುವ ಮೂಲಕ ಜನಾಂಗಕ್ಕೆ ಸರ್ಕಾರದಲ್ಲಿ ಪ್ರಾತಿನಿಧ್ಯ ಹಾಗೂ ಕೊಡಗಿನ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಲು ಒಕ್ಕೊರಲಿನ ನಿರ್ಣಯದ ಸಭೆಯಾಗಿದೆ ಎಂದು ಕೊಡವ ಜನಾಂಗದ ಮಾತೃ ಸಂಸ್ಥೆಯಾಗಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಪರದಂಡ ಸುಬ್ರಮಣಿ ಕಾವೇರಪ್ಪ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಸ್ಪಷ್ಟಪಡಿಸಿದರು.
ಹೆಚ್ಚಿನ ಮಾಹಿತಿಗೆ 90084 96136 ಅಥವಾ 9880967573 ಸಂಪರ್ಕಿಸಲು ಕೋರಿದ್ದಾರೆ.