ಸುಂಟಿಕೊಪ್ಪ ಮೇ 24 : ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಡೆಂಗ್ಯೂ ಜ್ವರ ಹೆಚ್ಚುತ್ತಿರುವ ಹಿನ್ನೆಲೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್ ಕುಮಾರ್ ಭೇಟಿ ನೀಡಿ ಪರಿಶೀಲಿಸಿದರು.
ಈ ಸಂದರ್ಭ ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಎ.ಉಸ್ಮಾನ್ ಮಾತನಾಡಿ, ಈ ಭಾಗದ ಮಂದಿ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಎದುರಾದರೂ ಈ ಆರೋಗ್ಯ ಕೇಂದ್ರವನ್ನೆ ಅವಲಂಭಿಸಿದ್ದಾರೆ. ಪ್ರತಿ ನಿತ್ಯ 100ಕ್ಕೂ ಅಧಿಕ ಮಂದಿ ಚಿಕಿತ್ಸೆಗೆ ಬರುತ್ತಾರೆ. ಇಲ್ಲಿನ ಆಸ್ಪತ್ರೆಯಲ್ಲಿ ಖಾಯಂ ವೈದ್ಯರಿಲ್ಲ. ರಾತ್ರಿ ಪಾಳಯದ ವೈದ್ಯರು ಲಭ್ಯವಿಲ್ಲ, ರಾಷ್ಟ್ರೀಯ ಹೆದ್ದಾರಿ ಹಾದು ಹೋಗಿರುವುದರಿಂದ ನಿತ್ಯ ನೂರಾರು ವಾಹನಗಳಲ್ಲಿ ಪ್ರವಾಸಿಗಾರು ತೆರಳುವ ಸಂದರ್ಭ ಅಪಘಾತಗಳು ಸಂಭವಿಸಿದಾಗ ಗಾಯಗೊಂಡವರು ಮೃತಪಟ್ಟವರು ಆಗಮಿಸುತ್ತಾರೆ. ಈ ಸಂದರ್ಭ ಮರಣೋತ್ತರ ಪರೀಕ್ಷೆ ನಡೆಸಲು ವೈದ್ಯರು ‘ಡಿ’ಗ್ರೂಫ್ ನೌಕರರ ಕೊರತೆ ಇದೆ. ರಾತ್ರಿ ವೇಳೆ ಹೆರಿಗೆಗೆ ದಾಖಲಾಗುವವರು ಬರುತ್ತಾರೆ. ಶುಶ್ರೂಷಿಕರ ಕೊರತೆ ಇದೆ ಅದನ್ನು ಭರ್ತಿ ಮಾಡಬೇಕು. ಆಸ್ಪತ್ರೆಯ ಆಂಬ್ಯುಲೆನ್ಸ್ ವಾಹನವು ಸಾರ್ವಜನಿಕರ ಸೇವೆಗೆ ಲಭ್ಯವಾಗುತ್ತಿಲ್ಲ ಎಂದು ಸಮಸ್ಯೆಗಳನ್ನು ಮುಂದಿಟ್ಟರು.
ಡಾ.ಸತೀಶ್ ಕುಮಾರ್ ಮಾತನಾಡಿ ವೈದ್ಯರ ಕೊರತೆ ಎಲ್ಲೆಡೆ ಇದೆ ಇತರೆ ಸಮಸ್ಯೆಗಳನ್ನು ಶೀಘ್ರದಲ್ಲೇ ಬಗೆಹರಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಡೆಂಗ್ಯೂ ಜ್ವರ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಕಂಡು ಬಂದಿದ್ದು, ಜಿಲ್ಲಾಡಳಿತ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮುಂಜಾಗೃತ ಕ್ರಮ ಕೈಗೊಳ್ಳಲಾಗಿದೆ ಎಂದೂ ಹೇಳಿದರು.