ನಾಪೋಕ್ಲು ಜೂ.1 : ಹೊದವಾಡ ಗ್ರಾಮದ ಶ್ರೀ ಭಗವತಿ ಅಮ್ಮೆರಪ್ಪ ದೇವಾಲಯದ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನ ಅಷ್ಟಮಂಗಲ ಮಹೋತ್ಸವವು ಆರಂಭಗೊಂಡಿತು.
ಪ್ರತಿಷ್ಠಾಪನ ಮಹೋತ್ಸವದ ಅಂಗವಾಗಿ ಸಂಜೆ ದೇವಾಲಯದಲ್ಲಿ ವಾಸ್ತು ಹೋಮ, ವಾಸ್ತು ಬಲಿ ಹಾಗೂ ವಾಸ್ತು ಕಲಶಾ ಪೂಜೆಗಳು ಜರುಗಿತು.
ಬೆಳಿಗ್ಗೆ ಗಣ ಹೋಮ, ಅನುಜ್ಞಾ ಕಲಶ ಪೂಜೆ, ಅನುಜ್ಞಾ ಕಳಸಾಭಿಷೇಕ, ಜೀವ ಕಲಶ ಹಾಗೂ ಬಿಂಬಶುದ್ಧಿ ಕಳಶ ಪೂಜೆಗಳು ಜರುಗಿ ಸಂಜೆ ಆದಿವಾಸ ಹೋಮ ಹಾಗೂ ಮಂಡಲ ಪೂಜೆಗಳು ನೆರವೇರಿಸಲಾಯಿತು.
ದೇವಾಲಯವು ಸುಮಾರು 600 ವರ್ಷಗಳ ಇತಿಹಾಸವನ್ನು ಹೊಂದಿದ್ದು, ರಾಜರ ಕಾಲದಲ್ಲಿ ಕಟ್ಟಲ್ಪಟ್ಟದ್ದಾಗಿರುತ್ತದೆ. ದೇವಾಲಯದ ಜೀರ್ಣೋದ್ಧಾರಕ್ಕಾಗಿ ಗ್ರಾಮಸ್ಥರು ಹಾಗೂ ದಾನಿಗಳು ಧನಸಹಾಯವನ್ನು ನೀಡಿದ್ದಾರೆ. ದೇವಾಲಯದ ಜೀರ್ಣೋದ್ಧಾರದ ಜೊತೆಗೆ ಗಣಪತಿ ಗುಡಿ ಹಾಗೂ ಸುಬ್ರಮಣ್ಯ ಗುಡಿಗಳನ್ನು ನಿರ್ಮಿಸಲಾಗಿದೆ. ದೇವಸ್ಥಾನದ ಪ್ರತಿಷ್ಠಾಪನ ಅಷ್ಟಬಂಧ ಬ್ರಹ್ಮಕಲಶ ಮೂರು ದಿನಗಳ ಕಾಲ ನಡೆಯಲಿದ್ದು, ಪೂಜಾ ಕೈಂಕರ್ಯಗಳನ್ನು ಕೇರಳದ ಪಾಲೆಘಾಟ್ನ ಶ್ರೀ ನಾರಾಯಣ ತಂತ್ರಿ ನೆರವೇರಿಸಲಿರುವರು.
ಕಾರ್ಯಕ್ರಮದಲ್ಲಿ ದೇವಾಲಯದ ತಕ್ಕ ಮುಖ್ಯಸ್ಥರು ಜೀರ್ಣೋದ್ಧಾರ ಸಮಿತಿ ಪ್ರಮುಖರು ಹಾಗೂ ಸಮಿತಿ ಸದಸ್ಯರು ಸೇರಿದಂತೆ ಊರ ಮತ್ತು ಪರ ಊರಿನ ಭಕ್ತಾದಿಗಳು ಪಾಲ್ಗೊಂಡಿದ್ದರು.
ವರದಿ : ದುಗ್ಗಳ ದುಗ್ಗಳ ಸದಾನಂದ.