ಪಾರಾಣೆ ಜೂ.1 : ಗ್ರಾಮೀಣಾ ಮಹಿಳೆಯರ ಆರ್ಥಿಕ ಮಟ್ಟ ಸುಧಾರಣೆಗಾಗಿ ರಾಜ್ಯ ಸರ್ಕಾರಗಳು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಮಹಿಳೆಯರು ಯೋಜನೆ ಸದುಪಯೋಗಪಡಿಸಿಕೊಂಡು ಮುನ್ನಡೆಯಬೇಕು ಎಂದು ಪದ್ಮಶ್ರೀ ಪುರಸ್ಕೃತ ಎಂ.ರಾಣಿ ಮಾಚಯ್ಯ ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕೊಡಗು ಜಿ.ಪಂ, ಮಡಿಕೇರಿ ತಾ.ಪಂ ಮತ್ತು ಕೊಣಂಜಗೇರಿ ಪಾರಾಣೆ ಗ್ರಾ.ಪಂ ಹಾಗೂ ಸಂಜೀವಿನಿ ಒಕ್ಕೂಟದ ಸಂಯುಕ್ತ ಆಶ್ರಯದಲ್ಲಿ ಪಾರಾಣೆ ಪ್ರೌಢಶಾಲಾ ಮೈದಾನದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಹಬ್ಬದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ, ಕರಕುಶಲ ಉತ್ಪಾದನೆಗಳ ಪ್ರದರ್ಶನ ಮೇಳ ಮತ್ತು ಮಹಿಳಾ ಸಂಘಗಳ ವಿವಿಧ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಣಿ ಮಾಚಯ್ಯ, ಪಟ್ಟಣ ನಗರ ಭಾಗಗಳಲ್ಲಿ ನೆಲೆಸಿರುವ ಮಹಿಳೆಯರು ಮಾತ್ರ ಅಭಿವೃದ್ಧಿ ಹೊಂದುತ್ತಿರುವುದು ಎನ್ನುವುದು ದೂರದ ಮಾತಾಗಿದೆ. ಗ್ರಾಮೀಣಾ ಭಾಗದ ಮಹಿಳೆಯರು ತಮ್ಮ ಪ್ರತಿಭೆಯನ್ನು ಇಂತಹ ಕಾರ್ಯಕ್ರಮದಲ್ಲಿ ಪ್ರದರ್ಶನ ಮಾಡಬೇಕು.
ಸರ್ಕಾರವು ಗ್ರಾಮೀಣಾ ಭಾಗದ ಮಹಿಳೆಯರಿಗೆ ಆರ್ಥಿಕ ಮಟ್ಟ ಸುಧಾರಿಸಲು ಹಲವಾರು ಯೋಜನೆಗಳಿಗೆ ಅನುದಾನಗಳನ್ನು ಬಿಡುಗಡೆ ಮಾಡುತ್ತದೆ. ಅನುದಾನಗಳನ್ನು ಪಡೆದು ಸಮಾಜದಲ್ಲಿ ಸುಧಾರಿತ ಜೀವನ ಕಂಡುಕೊಳ್ಳಬೇಕು ಎಂದು ಹೇಳಿದರು.
ಕೊಣಂಜಗೇರಿ ಪಾರಾಣೆ ಗ್ರಾ.ಪಂ ಅಧ್ಯಕ್ಷ ಬೆಳ್ಳಿಮಯ್ಯ ಮಾತನಾಡಿ, ಪ್ರಸ್ತುತ ಸಮಾಜಕ್ಕೆ ಅಭಿವೃದ್ಧಿ ಹೊಂದುತ್ತಿರುವ ಮಹಿಳೆಯರ ಸಹಕಾರ ಅತ್ಯವಶ್ಯಕವಾಗಿದೆ. ಅಭಿವೃದ್ಧಿಗೊಂಡ ಮಹಿಳೆಯರಿಂದ ಗ್ರಾಮದ ಏಳಿಗೆ ಸಾಧ್ಯ. ಗ್ರಾ.ಪಂ ಅಧಿಕಾರ ವ್ಯಾಪ್ತಿಯಲ್ಲಿ ಅನುದಾನಗಳ ಬಳಕೆ ಮತ್ತು ಗ್ರಾಮದ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಮಹಿಳೆಯರು ಸಕ್ರೀಯರಾಗಿ ಭಾಗವಹಿಸಬೇಕು. ತಮ್ಮ ಮಕ್ಕಳಿಗೆ ಗ್ರಾಮೀಣಾ ಕಲೆ, ಕೃಷಿ, ಪರಿಸರದ ಬಗ್ಗೆ ತಿಳಿಹೇಳಬೇಕು, ಗ್ರಾಮೀಣಾ ಭಾಗದ ಸಂಸ್ಕೃತಿಯನ್ನು ಪರಿಚಯಿಸುವ ನಿಟ್ಟಿನಲ್ಲಿ ಮಹಿಳೆಯರು ಮುಂದಾಗಬೇಕು ಸಲಹೆ ನೀಡಿದರು.
ಗ್ರಾ.ಪಂ ಪಿ.ಡಿ.ಓ ಸೇಬಾಸ್ಟೀನ್ ಮತ್ತು ಸಂಜೀವಿನಿ ಒಕ್ಕೂಟದ ಜಿಲ್ಲಾ ಸಂಚಾಲಕ ಕುಮಾರ್ ಮಾತನಾಡಿದರು.
ಸಂಜೀವಿನಿ ಒಕ್ಕೂಟ ಪಾರಾಣೆ ವಲಯ ಅಧ್ಯಕ್ಷರಾದ ಬಲ್ಯಂಡ ಜಿ ರಾಣಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಲಯ ಮೆಲ್ವಿಚಾರಕರಾದ ಪೊನ್ನಚೆಟ್ಟಿರ ಪವಿತ್ರ, ಗ್ರಾ.ಪಂ ಸದಸ್ಯ ಕಟ್ಟಿ ಕುಶಾಲಪ್ಪ, ಕೊಣಂಜಗೇರಿ-ಪಾರಾಣೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಸ್ಥರು ಸೇರಿದಂತೆ ಸಂಜೀವಿನಿ ಒಕ್ಕೂಟ ಪಾರಾಣೆ ಶಾಖೆಯ ಪದಾಧಿಕಾರಿಗಳು, ಸದಸ್ಯರು, ವಿವಿಧ ಸ್ವಸಹಾಯ ಗುಂಪುಗಳ ಸದಸ್ಯರು ಹಾಜರಿದ್ದರು.
ಸಂಜೀವಿನಿ ಒಕ್ಕೂಟದ ಮಡಿಕೇರಿ ವಲಯ ಮೆಲ್ವಿಚಾರಕರಾದ ಶ್ವೆತ ಸರ್ವರನ್ನು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಸಂಜೀವಿನಿ ಒಕ್ಕೂಟದ ಜಿಲ್ಲಾ ಸಂಚಾಲಕ ಕುಮಾರ್, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಎಂ.ರಾಣಿ ಮಾಚಯ್ಯ, ಗ್ರಾ.ಪಂ ಅಧ್ಯಕ್ಷ ಬೆಳ್ಳಿಮಯ್ಯ, ಪಿ.ಡಿ.ಓ ಸೇಬಾಸ್ಟೀನ್ ಅವರನ್ನು ಒಕ್ಕೂಟದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಸಂಜೀವಿನಿ ಒಕ್ಕೂಟದ ಪಾರಾಣೆ ವಲಯದ ಎಂ.ಡಿ.ಕೆ. ಅಪ್ಪನೆರೆವಂಡ ನಯನ ರಾಜೇಶ್ ವಾರ್ಷಿಕ ವರದಿ ವಾಚಿಸಿದರು. ಕಾಯಕ್ರಮದ ಮೊದಲಿಗೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ರಾಣಿ ಮಾಚಯ್ಯ ಅವರು ರಿಬ್ಬನ್ ಕತ್ತರಿಸುವ ಮೂಲಕ ಮಹಿಳಾ ಹಬ್ಬವನ್ನು ಉದ್ಘಾಟನೆ ಮಾಡಿದರು. ಕೊಣಂಜಗೇರಿ ಪಾರಾಣೆ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಾದ ಬಾವಲಿ, ಕೊಣಂಜಗೇರಿ, ಕಿರುಂದಾಡು, ಪಾರಾಣೆ, ಬಲಮುರಿ, ಮತ್ತು ಕೈಕಾಡ್ ಗ್ರಾಮಗಳ ಸುಮಾರು 30 ಕ್ಕೂ ಅಧಿಕ ಸ್ವಸಹಾಯ ಗುಂಪುಗಳ ಮಹಿಳಾ ಪ್ರತಿನಿಧಿಗಳು ತಮ್ಮ ಕೃಷಿ ಉತ್ಪನ್ನ ಮತ್ತು ಇತರ ವಸ್ತುಗಳನ್ನು ಸಂತೆಯಲ್ಲಿ ಪ್ರದರ್ಶನ ಮಾಡಿದರು,
ಆರೋಗ್ಯ ಇಲಾಖೆಯಿಂದ ಗ್ರಾಮಸ್ಥರಿಗೆ ಮತ್ತು ಮಹಿಳಾ ಗುಂಪುಗಳ ಸದಸ್ಯರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಿತು. ಮಹಿಳಾ ಸದಸ್ಯರಿಗೆ ವಿವಿಧ ಆಟೋಟ ಸ್ಪರ್ಧೆ ನಡೆದು ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ವರದಿ : ಕಿಶೋರ್ ಕುಮಾರ್ ಶೆಟ್ಟಿ