ಮಡಿಕೇರಿ ಜೂ.6 : ಮಾದಕ ವಸ್ತುವನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಜಿಲ್ಲಾ ಪೊಲೀಸರು ಬಂಧಿಸಿರುವ ಘಟನೆ ಎಂ.ಬಾಡಗ ಗ್ರಾಮದಲ್ಲಿ ನಡೆದಿದೆ.
ಮೂರ್ನಾಡು ನಿವಾಸಿ ಅಲ್ತಾಫ್ ಹುಸೇನ್ (34) ಎಂಬಾತನೆ ಬಂಧಿತ ವ್ಯಕ್ತಿಯಾಗಿದ್ದು, ಈತನ ಬಳಿಯಲ್ಲಿದ್ದ 12.150 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.
ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ನಮ್ಮ ಕಛೇರಿ ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿರುವ ಹಿನ್ನೆಲೆ ಮಡಿಕೇರಿ ಉಪವಿಭಾಗದ ಡಿವೈಎಸ್‍ಪಿ ಎಂ.ಜಗದೀಶ್, ಮಡಿಕೇರಿ ಗ್ರಾಮಾಂತರ ಠಾಣೆ ವೃತ್ತ ನಿರೀಕ್ಷಕ ಉಮೇಶ್.ಯು., ಮಡಿಕೇರಿ ಗ್ರಾಮಾಂತರ ಠಾಣಾ ಪಿಎಸೈ ಶ್ರೀನಿವಾಸಲು ಹಾಗೂ ಸಿಬ್ಬಂದಿಗಳ ತಂಡವನ್ನು ಎಸ್‍ಪಿ ಅವರ ಮಾರ್ಗದರ್ಶನದಲ್ಲಿ ರಚಿಸಲಾಗಿದೆ.
ಈ ತಂಡ ದೊರೆತ ಖಚಿತ ಮಾಹಿತಿಯನ್ನು ಆಧರಿಸಿ ಎಂ.ಬಾಡಗ ಗ್ರಾಮದ ಕಿಗ್ಗಾಲು ರಸ್ತೆಯ ಜಂಕ್ಷನ್ ಬಳಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಅಲ್ತಾಫ್ ಹುಸೇನ್‍ನನ್ನು ಸ್ಥಳಕ್ಕೆ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.
ವಿಶೇಷ ಸೂಚನೆ : ಯುವಕ-ಯುವತಿಯರು ಮಾದಕ ವ್ಯಸನಿಗಳಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುವುದನ್ನು ತಡೆಗಟ್ಟುವ ಸಲುವಾಗಿ ಮಾದಕ ವಸ್ತುಗಳನ್ನು ಬಳಸುವ ಹಾಗೂ ಮಾರಾಟ ಮಾಡುವ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ ಹಾಗೂ ಕೆ.ಎಸ್.ಪಿ. ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಎಸ್‍ಪಿ ರಾಮರಾಜನ್ ಸಾರ್ವಜನಿಕರಲ್ಲಿ ಕೋರಿದ್ದು, ಅಕ್ರಮ ಚಟುವಟಿಕೆಗಗಳ ಕುರಿತು ಮಾಹಿತಿ ಒದಗಿಸುವವರ ವಿವರಗಳನ್ನು ಬಹಿರಂಗಪಡಿಸುವುದಿಲ್ಲವೆಂದು ಪೊಲೀಸ್ ಇಲಾಖಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.