ಕುಶಾಲನಗರ ಜೂ.7 : ಉಚಿತ ವಿದ್ಯುತ್ ಯೋಜನೆ ಜಾರಿಗೆ ಹಲವು ಷರತ್ತು ವಿಧಿಸುವುದರೊಂದಿಗೆ ದಿಡೀರನೆ ಸರಕಾರ ವಿದ್ಯುತ್ ದರ ಏರಿಕೆ ಮಾಡಿರುವುದನ್ನು ಖಂಡಿಸಿ ಕುಶಾಲನಗರ ನಗರ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರ ಬಿಜೆಪಿ ಅಧ್ಯಕ್ಷ ಉಮಾಶಂಕರ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿದ್ದರಾಮಯ್ಯ ಸರ್ಕಾರ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿದರು.
ಈ ಸಂದರ್ಭ ಮಾತನಾಡಿದ ನಗರ ಅಧ್ಯಕ್ಷ ಉಮಾಶಂಕರ್ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿಗೆ ತಪ್ಪಿದೆ. ಚುನಾವಣೆ ಮುಂಚೆ ನೀಡಿದ ಗ್ಯಾರಂಟಿ ಯೋಜನೆಗಳು ಉಚಿತ ಎಂದು ಹೇಳಿದ್ದು ಇದೀಗ ಶರತ್ತು ವಿಧಿಸಲಾಗುತ್ತಿದೆ, ಜೊತೆಗೆ ವಿದ್ಯುತ್ ದರದಲ್ಲಿ ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಬರೆ ಎಳೆದಿದೆ ಎಂದು ಆರೋಪಿಸಿದರು.
ಹಿರಿಯ ಮುಖಂಡ ಜಿ.ಎಲ್.ನಾಗರಾಜ್ ಮಾತನಾಡಿ, ಉಚಿತ ಯೋಜನೆಗಳ ಬಗ್ಗೆ ಕಾಂಗ್ರೆಸ್ ಸರ್ಕಾರಕ್ಕೆ ಸ್ಪಷ್ಟ ಕಲ್ಪನೆಗಳು ಲಭಿಸಿಲ್ಲ. ವೋಟು ಪಡೆದು ಅಧಿಕಾರಕ್ಕಾಗಿ ನಾಟಕ ಆಡಿದ್ದಾರೆ ಎಂದು ಆರೋಪಿಸಿದ ಅವರು ರಾಜ್ಯಾದ್ಯಂತ ಪಕ್ಷದ ವತಿಯಿಂದ ಪ್ರತಿಭಟನೆಗಳು ನಡೆಯುತ್ತಿದ್ದು, ಮಾತು ತಪ್ಪಿದ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಪಕ್ಷದ ಪ್ರಮುಖರಾದ ಕೆ.ಜಿ.ಮನು, ಎಂ.ಡಿ.ಕೃಷ್ಣಪ್ಪ, ಬೋಸ್ ಮೊಣ್ಣಪ್ಪ, ಅಮೃತರಾಜ್, ರೂಪ ಉಮಾ ಶಂಕರ್, ಶೈಲ ಕೃಷ್ಣಪ್ಪ, ಎಂ.ಎಂ.ಚರಣ್, ವೈಶಾಕ್, ಮಧುಸೂದನ್, ಭಾಸ್ಕರ ನಾಯಕ್, ಸುಮನ್ ಚಂದ್ರಶೇಖರ್, ಗೀತಾ ಲಿಂಗಪ್ಪ ಪ್ರದೀಪ್ ಮತ್ತಿತರ ಕಾರ್ಯಕರ್ತರು ಇದ್ದರು.