ನಾಪೋಕ್ಲು ಜೂ.16 : ಅತೀ ಹೆಚ್ಚು ಗ್ರಾಮಗಳನ್ನು ಹೊಂದಿರುವ ನಾಪೋಕ್ಲು ವ್ಯಾಪ್ತಿಯಲ್ಲಿ ಸಮುದಾಯ ಆರೋಗ್ಯ ಕೇಂದ್ರ ಇದ್ದರೂ ಅಗತ್ಯವಾದ ವೈದ್ಯರ ಸೇವೆ ಲಭಿಸದೆ ದಶಕಗಳಿಂದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಎಂದು ಆರೋಪಿಸಿರುವ ಜಿಲ್ಲಾ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಕಾರ್ಯದರ್ಶಿ ನಾಪೋಕ್ಲುವಿನ ಟಿ.ಎ. ಮೊಹಮ್ಮದ್ ಹನೀಫ್ ಆರೋಗ್ಯ ಕೇಂದ್ರದಲ್ಲಿ ದಿನದ 24 ಗಂಟೆ ಸಮರ್ಪಕವಾಗಿ ವೈದ್ಯರ ಸೇವೆ ಒದಗಿಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಹೆಚ್ಚು ಜನಸಂಖ್ಯೆ ಹೊಂದಿರುವ ನಾಪೋಕ್ಲು ಪಟ್ಟಣದಲ್ಲಿ ಈ ಹಿಂದೆ ಇದ್ದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಕೆಡವಿ ಸರ್ಕಾರ ಕೋಟಿಗಟ್ಟಲೆ ಹಣ ಖರ್ಚುಮಾಡಿ ಸುಸಜ್ಜಿತ ಕಟ್ಟಡ ನಿರ್ಮಿಸಿ ಸಮುದಾಯ ಆರೋಗ್ಯ ಕೇಂದ್ರವನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ. ಆದರೆ ವೈದ್ಯರ ನೇಮಕದ ಬಗ್ಗೆ ಮಾತ್ರ ಇದುವರೆಗು ಯಾರೂ ಕಾಳಜಿ ತೋರಿಲ್ಲವೆಂದು ಆರೋಪಿಸಿದ್ದಾರೆ.
ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಪ್ರತಿದಿನ 200ರಿಂದ 300 ಮಂದಿ ರೋಗಿಗಳು ಬರುತ್ತಿದ್ದಾರೆ. ಆದರೆ ಇಲ್ಲಿರುವ ಎರಡು ವೈದ್ಯರುಗಳು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4ರ ತನಕ ಮಾತ್ರ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಒಬ್ಬರು ವೈದ್ಯಾಧಿಕಾರಿ ತಿಂಗಳ ಅರ್ಧದಷ್ಟು ದಿನಗಳು ಕರ್ತವ್ಯಕ್ಕೆ ಗೈರು ಆಗುತ್ತಿದ್ದು ಇವರು ಕೂಡ ಇದ್ದು ಇಲ್ಲದಂತಾಗಿದೆ. ಅದರಂತೆ ಇಲ್ಲಿ ಸ್ತ್ರೀರೋಗ ತಜ್ಞರ ಕೊರತೆಯಿಂದ ಮಹಿಳೆಯರು ಖಾಸಗಿ ಆಸ್ಪತ್ರೆಗೆ ಹೋಗುವ ಪರಿಸ್ಥಿತಿ ಇದೆ. ಎಕ್ಸ್ರೇ ಯಂತ್ರೋಪಕರಣ ಇದ್ದು ಸೋಮವಾರದಿನ ಮಾತ್ರ ಇದರ ತಂತ್ರಜ್ಞರು ಲಭ್ಯವಿರುತ್ತಾರೆ. ಯಾವುದೇ ತುರ್ತು ಸಂದರ್ಭ ಅಥವಾ ಅಪಘಾತ, ಅನಾಹುತಗಳಿಂದ ಮೃತಪಟ್ಟರೆ ಮರಣೋತ್ತರ ಪರೀಕ್ಷೆ ನಡೆಸಲು ಮಡಿಕೇರಿ ಇನ್ನಿತರ ಕಡೆ ಸಾಗಿಸುವಂತ್ತಾಗಿದೆ. ರಾತ್ರಿಸಮಯದಲ್ಲಿ ಜನರಿಗೆ ಯಾವುದೇ ವೈದ್ಯರ ಸೇವೆ ಇಲ್ಲದೆ ರೋಗಿಗಳು ವರದಾಡುವಂತಹ ಪರಿಸ್ಥಿತಿ ಎದುರಾಗಿದೆ. ಇಲ್ಲಿನ ಅವ್ಯವಸ್ಥೆ ಬಗ್ಗೆ ಸ್ಥಳೀಯರು ಹಲವು ಭಾರಿ ಪ್ರತಿಭಟನೆ ನಡೆಸಿ ಮೆಲಾಧಿಕಾರಿಗಳಿಗೆ ದೂರು ನೀಡಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರ ಕೊರತೆ ಬಗ್ಗೆ ಗಮನಹರಿಸಿ ಜನರಿಗೆ ಸಮರ್ಪಕವಾದ ವೈದ್ಯರ ಸೇವೆ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಹನೀಫ್ ಮನವಿ ಮಾಡಿದ್ದಾರೆ.
ವರದಿ :ಝಕರಿಯ ನಾಪೋಕ್ಲು