ನಾಪೋಕ್ಲು ಜೂ.16 : ಕೇರಳದ ಕಲ್ಲಿಕೋಟೆಯಲ್ಲಿರುವ ಮರ್ಕಝ್ ನಾಲೇಜ್ ಸಿಟಿಯಲ್ಲಿ ಅಂತರಾಷ್ಟ್ರೀಯ ವೈದ್ಯಕೀಯ ಸಮ್ಮೇಳನ ಸಂಭ್ರಮದಿಂದ ನಡೆಯಿತು.
ಮರ್ಕಝ್ ಯುನಾನಿ ವೈದ್ಯಕೀಯ ಕಾಲೇಜು, ಡಾ.ಮೂಪನ್ಸ್ ವೈದ್ಯಕೀಯ ಕಾಲೇಜು ಮತ್ತು ಮೆಡಿಸಿನ್ ಇಂಡಿಯಾ ಇವುಗಳ ಜಂಟಿ ಆಶ್ರಯದಲ್ಲಿ ಆಯೋಜಿಸಲಾದ ಸಮ್ಮೇಳನವನ್ನು
ಮೂಪನ್ಸ್ ವೈದ್ಯಕೀಯ ಕಾಲೇಜಿನ ಡೀನ್ ಡಾ.ಗೋಪಕುಮಾರ ಕರ್ತ ಉದ್ಘಾಟಿಸಿದರು.
ಮರ್ಕಝ್ ನಾಲೇಜ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ಡಾ.ಎ.ಪಿ ಅಬ್ದುಲ್ ಹಕೀಂ ಅಝ್ಹರಿ ಮುಖ್ಯ ಭಾಷಣ ಮಾಡಿದರು. ಡಾ.ಅನೀಶ್ ಬಶೀರ್, ಡಾ.ಅಮೀರ್ ಹಸನ್, ಡಾ.ಶೇಖ್ ಶಾಹುಲ್ ಹಮೀದ್ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಸ್ಟ್ರೇಲಿಯದ ಪ್ರೊ.ಅಲನ್ ಬಿಟ್ಟಿಲ್, ಡಾ.ಅಜು ಮ್ಯಾಥ್ಯೂ, ಡಾ.ಗ್ರೇಸ್ ರೌಲಿ ಯುಕೆ, ಡಾ.ಒಕೆಎಂ ಅಬ್ದುರ್ರಹ್ಮಾನ್, ಡಾ.ಪಿವಿ ಶಂಸುದ್ದೀನ್, ಡಾ.ಗಿರೀಶ್ ವಡಗೊಂಕರ್ ಮುಂಬೈ ಮತ್ತು ಇತರ ವೈದ್ಯಕೀಯ ರಂಗದ ತಜ್ಞರು ವಿವಿಧ ವಿಷಯಗಳ ಕುರಿತು ಮಾಹಿತಿ ನೀಡಿದರು.
ಕ್ಯಾನ್ಸರ್ ಆರೈಕೆ, ಪೋಷಕ ಆಹಾರ, ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ, ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆಗೆ ಯುನಾನಿ ವಿಧಾನ ಮರ್ಕಝ್ ವಿಧಾನ, ಆರೋಗ್ಯ ಸೇವೆಯ ಗುಣಮಟ್ಟ ಸುಧಾರಣೆ, ವೈದ್ಯಕೀಯ ನೀತಿಶಾಸ್ತ್ರ ಮುಂತಾದ ವಿಷಯಗಳ ಕುರಿತು ಚರ್ಚಿಸಲಾಯಿತು.
ಮೆಡಿಸಿನ್ ಇಂಡಿಯಾ ಸಂಸ್ಥಾಪಕ ಡಾ. ಸುಜಾ ಪುನೇಕರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ದೇಶದ ವಿವಿಧ ವೈದ್ಯಕೀಯ ಕಾಲೇಜುಗಳ ಸುಮಾರು ಸಾವಿರಕ್ಕೂ ಅಧಿಕ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ವೈದ್ಯರುಗಳು ಪಾಲ್ಗೊಂಡಿದ್ದರು.
ವರದಿ :ಝಕರಿಯ ನಾಪೋಕ್ಲು