ಸುಂಟಿಕೊಪ್ಪ ಜೂ.17: ಜೂನ್ ತಿಂಗಳಿನಲ್ಲಿ ಮೃಗಶಿರ ಮಳೆ ಬೆಳೆಗಾರರ ರೈತರ ಚಟುವಟಿಕೆಗಳಿಗೆ ಆಶಾದಾಯಕವಾಗಿರುತ್ತದೆ. ಆದರೆ ಈ ವರ್ಷ ಮಳೆ ಬಾರದೆ ಕರಿಮೆಣಸಿನ ಫಸಲಿಗೆ ಹೊಡೆತ ನೀಡಿದೆ. ಭತ್ತದ ಬಿತ್ತನೆಗಾಗಿ ಗದ್ದೆ ಹದ ಮಾಡಿದ ರೈತ ಮಳೆಗಾಗಿ ಆಕಾಶದತ್ತ ನೋಡುವಂತಾಗಿದೆ.
ಜೂನ್ ತಿಂಗಳಿನಲ್ಲಿ ಸರಿಯಾಗಿ ಮಳೆ ಬಾರದೆ ಕರಿಮೆಣಸಿನ ಕೊತ್ತು ಬಿಡುವ ಸಕಾಲ ಮಳೆ ಮಾಯವಾಗಿದೆ. ಮುಂದಿನ ವರ್ಷದ ಕರಿಮೆಣಸು ಇಳುವರಿಗೆ ಭಾರೀ ಹಿನ್ನಡೆಯಾಗಲಿದೆ ಎಂದು ಬೆಳೆಗಾರರು ಕಂಗಾಲಾಗಿದ್ದಾರೆ.
ಜೂನ್ ತಿಂಗಳಿನಲ್ಲಿ ಭತ್ತದ ಬಿತ್ತನೆ ಕಾರ್ಯ ಆರಂಭವಾಗಲಿದ್ದು, ಮಳೆ ಸರಿಯಾಗಿ ಬಾರದೆ ಕೃಷಿಕರ ಮೊಗದಲ್ಲಿ ಆತಂಕ ಮೂಡಿದೆ.
ಅನಿಸಿಕೆ: ಪ್ರತೀ ವರ್ಷ ಕರಿಮೆಣಸಿನ ಬಳ್ಳಿ 2018 ರ ಮಹಾಮಳೆಯಿಂದ ಹಳದಿ ರೋಗ ಕೊಳೆರೋಗದಿಂದ ನಶಿಸುತ್ತಿದೆ. ಇದಕ್ಕೆ ಮಣ್ಣಿನ ಫಲವತ್ತತೆ ಕಡಿಮೆಯಾಗಿರುವುದೇ ಕಾರಣವಾಗಿದೆ. ವಿಜ್ಞಾನಿಗಳು ಏನೇ ಪರಿಹಾರ ಸೂಚಿಸಿದ್ದರೂ ಕರಿಮೆಣಸಿನ ಬಳ್ಳಿಗೆ ಬರುವ ರೋಗ ತಡೆಯಲು ಸಾಧ್ಯವಾಗುತ್ತಿಲ್ಲ. ಈ ವರ್ಷ ಜೂನ್‍ನಲ್ಲಿ ಮಳೆ ಬಾರದೆ ಇರುವುದರಿಂದ ಕರಿಮೆಣಸು ಗಿಡಕ್ಕೆ ಸಿಗಬೇಕಾದ ಪೌಷ್ಠಿಕತೆ ಕಡಿಮೆಯಾಗಲಿದ್ದು, ಇಳುವರಿ ತೀರಾ ಕುಂಠಿತವಾಗಲಿದೆ ಎಂದು ಬೆಳೆಗಾರ ಟಿ.ಪಿ.ಸಂದೇಶ ತಿಳಿಸಿದರು.
ಜೂನ್‍ನಲ್ಲಿ ಮಳೆ ಬಂದರೆ ಭತ್ತ ಕೃಷಿ ಚಟುವಟಿಕೆಗಳಿಗೆ ಅನುಕೂಲಕರವಾಗಲಿದೆ. ಗದ್ದೆ ಉಳುಮೆ ಮಾಡಿ ಹದಮಾಡಿ ಇಟ್ಟಿದ್ದೇವೆ. ಮಳೆ ಬಾರದೆ ಬೀಜ ಬಿತ್ತನೆ ಕಾರ್ಯ ಮಾಡಲಾಗಿದೆ ಅಸಾಯಕರಾಗಿದ್ದೇವೆ ಎಂದು ಹರದೂರು ಗ್ರಾಮದ ಆಮೆಮನೆ ಸುಬ್ಬಯ್ಯ ಬೇಸರ ವ್ಯಕ್ತಪಡಿಸಿದರು.