ಮಡಿಕೇರಿ ಜೂ.19 : ತಾಳ್ಮೆ, ಸಮಯಪ್ರಜ್ಞೆ ಸಾಧನೆಯ ಮೊದಲ ಹೆಜ್ಜೆ ಆಗಿದೆ. ಇದನ್ನು ವಿದ್ಯಾರ್ಥಿಗಳು ಅರಿತು ತಮ್ಮ ಬದುಕಿನುದ್ದಕ್ಕೂ ಅಳವಡಿಸಿಕೊಂಡರೆ ಯಾವ ಕ್ಷೇತ್ರದಲ್ಲಿ ಬೇಕಾದರೂ ಸಾಧನೆ ಮಾಡಬಹುದು ಎಂದು ಅಂತರಾಷ್ಟ್ರೀಯ ರಗ್ಬಿ ಆಟಗಾರ ಮಾದಂಡ ಪಿ.ತಿಮ್ಮಯ್ಯ ತಿಳಿಸಿದರು.
ಮಂಗಳೂರು ವಿಶ್ವವಿದ್ಯಾನಿಲಯ, ಕೊಡಗು ವಿಶ್ವವಿದ್ಯಾನಿಲಯ, ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜು ವತಿಯಿಂದ ಎರಡು ದಿನಗಳ ಪ್ರತಿಭೋತ್ಸವ ಹಾಗೂ 74ನೇ ಕಾಲೇಜು ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.
ರಾಷ್ಟ್ರದಲ್ಲಿ ಕ್ರೀಡೆಗೆ ಇನ್ನೂ ಹೆಚ್ಚಿನ ಅವಕಾಶ ಕಲ್ಪಿಸಬೇಕಿದೆ. ವಿದ್ಯಾರ್ಥಿಗಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡಾ ಕ್ಷೇತ್ರದಲ್ಲಿ ಗುರುತಿಸಿಕೊಂಡು ಸಾಧಿಸಿದವರಿಗೆ ಭಾರತವು ಹೆಚ್ಚು ಮಾನ್ಯತೆ ನೀಡುತ್ತದೆ ಎಂದರು.
ಪದವಿ ಎಂಬುದು ಸಾಮಾನ್ಯ ಹಂತವಲ್ಲ ಪದವಿ ಓದುವಾಗಲೇ ವಿದ್ಯಾರ್ಥಿಗಳು ತಮಗೆ ಆಸಕ್ತಿ ಇರುವ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧಿಸಬೇಕು ಎಂದು ಅವರು ಹೇಳಿದರು.
“ಸೋಲು ಪ್ರತಿಯೊಂದು ಸಾಧನೆಗೆ ಮುನ್ನುಡಿ” ವಿದ್ಯಾರ್ಥಿಗಳು ಇದನ್ನರಿತು ಸೋತರು ಮರಳಿ ಪ್ರಯತ್ನ ಮಾಡಬೇಕು. ವಿದ್ಯಾರ್ಥಿಗಳು ತಮ್ಮ ಜೀವನದುದ್ದಕ್ಕೂ ಶಿಸ್ತು, ಸಮಯಪ್ರಜ್ಞೆ ಅಳವಡಿಸಿಕೊಂಡರೆ ಯಾವ ಕ್ಷೇತ್ರದಲ್ಲಿ ಬೇಕಾದರೂ ಸಾಧನೆ ಮಾಡಿ ಗುರುತಿಸಿಕೊಳ್ಳಬಹುದು. ಶಿಕ್ಷಣ ಜೀವನಕ್ಕೆ ಎಷ್ಟು ಮುಖ್ಯವಾಗಿದೆಯೋ ಕ್ರೀಡೆ ಕೂಡ ಅಷ್ಟೇ ಮುಖ್ಯವಾಗಿದೆ ಎಂದು ಮಾದಂಡ ಪಿ.ತಿಮ್ಮಯ್ಯ ಹೇಳಿದರು.
ವಿದ್ಯಾರ್ಥಿಗಳಲ್ಲಿ ಸಮಯಪಾಲನೆ ಅತಿ ಮುಖ್ಯ. ಕ್ರೀಡೆ, ಸಾಹಿತ್ಯ ಸಂಗೀತ ಹೀಗೆ ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳುವಂತಾಗಬೇಕು ಎಂದು ಅವರು ವಿವರಿಸಿದರು.
ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ರಾಘವ ಮಾತನಾಡಿ, ಛಲ ಇಲ್ಲದಿದ್ದರೆ ಪ್ರತಿಭೆ ಅನಾವರಣ ಮಾಡಲಾಗದು. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಅವರದೇ ಆದ ಪ್ರತಿಭೆ ಇದ್ದೇ ಇರುತ್ತದೆ. ವಿದ್ಯಾರ್ಥಿಗಳು ಅದನ್ನು ಗುರುತಿಸಿ ತನ್ನ ಕ್ಷೇತ್ರದಲ್ಲಿ ಸಾಧಿಸಲು ಕಾಲೇಜು ವೇದಿಕೆ ಕಲ್ಪಿಸುತ್ತದೆ ಎಂದು ನುಡಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ಆರ್.ಸವಿತಾ ರೈ ಮಾತನಾಡಿ ಧೈರ್ಯ, ಸಾಹಸ, ತಾಳ್ಮೆ, ಸಹನೆ ಇದ್ದರೆ ಖಂಡಿತ ಯಶಸ್ಸಿಗೆ ಸಹಕಾರಿಯಾಗುತ್ತದೆ. “ಮುಂದೆ ಗುರಿ ಹಿಂದೆ ಗುರು” ಇದ್ದರೆ ಸಾಧನೆ ಮಾಡಲು ಅಡಿಪಾಯವಾಗುತ್ತದೆ. ಹೆಣ್ಣು ಮಕ್ಕಳು ಎಲ್ಲಾ ಕ್ಷೇತ್ರದಲ್ಲಿಯೂ ತೊಡಗಿಸಿಕೊಳ್ಳಬೇಕು ಎಂದರು.
ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕ್ರೀಡೆ, ಚರ್ಚಾ ಸ್ಪರ್ಧೆ, ಉತ್ತಮ ಬರವಣಿಗೆ, ಲೇಖನ ಮುಂತಾದ ವಿಷಯಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಸಹಪಠ್ಯ ಚಟುವಟಿಕೆ ಸಂಚಾಲಕ ಡಾ.ಎಚ್.ಕೆ.ರೇಣುಶ್ರೀ, ವಿದ್ಯಾರ್ಥಿ ಸಂಘದ ಸಲಹೆಗಾರರಾದ ಬಿ.ಎಚ್.ತಳವಾರ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳಾದ ಪಿ.ಆರ್.ಶಿವಾನಿ, ಎಂ.ಬಿ.ಶಮನ್ ಅಪ್ಪಣ್ಣ, ಸಿ.ವೈ.ಮೇಘ ಸಿ.ವೈ ಮತ್ತಿತರರು ಪಾಲ್ಗೊಂಡಿದ್ದರು.









