ಮಡಿಕೇರಿ ಜೂ.20 : ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಪ್ರಯುಕ್ತ ಆ.14 ರಂದು ಕೊಡಗು ಮೂಲದ 25 ನಿವೃತ್ತ ಯೋಧರನ್ನು ಸನ್ಮಾನಿಸಲಾಗುತ್ತದೆ ಎಂದು ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕೆ.ಕೆ. ರೆಜಿತ್‍ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ ಹಾಗೂ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ಕೊಡಗು ಘಟಕ ಸಂಯುಕ್ತಾಶ್ರಯದಲ್ಲಿ ಮಡಿಕೇರಿಯ ಪತ್ರಿಕಾ ಭವನದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿದೆ. ವಿರಾಜಪೇಟೆ ಕಾವೇರಿ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಮಾಲಿ ಸೈನಿಕರ ಸಂಘದ ಕೊಡಗು ಘಟಕ ಅಧ್ಯಕ್ಷ ಕೊಟ್ಟುಕತ್ತಿರ ಸೋಮಣ್ಣ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸನ್ಮಾನ ಕಾರ್ಯಕ್ರಮದ ರೂಪುರೇಷೆ ಚರ್ಚಿಸಲಾಯಿತು. ಸೇನೆಯಲ್ಲಿ ಕರ್ತವ್ಯನಿರ್ವಹಿಸಿದ ಬಳಿಕ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ 25 ಯೋಧರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ.
ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿರುವ ನಿವೃತ್ತ ಯೋಧರ ಹೆಸರನ್ನು ಸನ್ಮಾನಕ್ಕೆ ಶಿಫಾರಸ್ಸು ಮಾಡಬಹುದು. ಫೋಟೋ ಸಹಿತ ಸಾಧನೆಯ ಮಾಹಿತಿಯೊಂದಿಗೆ ಬಯೋಡಾಟವನ್ನು ಜುಲೈ 2 ರೊಳಗೆ ಬೊಳ್ಳಜೀರ ಬಿ. ಅಯ್ಯಪ್ಪ, ಖಜಾಂಚಿ, ಕೊಡಗು ಪ್ರೆಸ್ ಕ್ಲಬ್ ಬೆಳ್ಳಿ ಮಹೋತ್ಸವ ಆಚರಣಾ ಸಮಿತಿ, ಪತ್ರಿಕಾ ಭವನ, ಕೈಗಾರಿಕಾ ಬಡಾವಣೆ, ಮಡಿಕೇರಿ, 571201 ಗೆ ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗೆ ಬೊಳ್ಳಜೀರ ಬಿ. ಅಯ್ಯಪ್ಪ (9880778047) ಅವರನ್ನು ಸಂಪರ್ಕಿಸಬಹುದು.