ಮಡಿಕೇರಿ ಜೂ.21 : ಕೊಡಗು ನೂತನ ಜಿಲ್ಲಾಧಿಕಾರಿಯಾಗಿ ವೆಂಕಟ್ ರಾಜ ಅಧಿಕಾರ ಸ್ವೀಕರಿಸಿದರು.
2013ರ ಬ್ಯಾಚ್‍ನ ಅಧಿಕಾರಿಯಾಗಿರುವ ವೆಂಕಟ್ ರಾಜ ಅವರಿಗೆ ನಿರ್ಗಮಿತ ಜಿಲ್ಲಾಧಿಕಾರಿ ಡಾ. ಬಿ.ಸಿ.ಸತೀಶ ಅಧಿಕಾರ ಹಸ್ತಾಂತರಿಸಿ, ಶುಭಕೋರಿದರು.
ಮೂಲತಃ ರಾಜಸ್ಥಾನ ಮೂಲದವರಾದ ವೆಂಕಟ್ ರಾಜ, ಹಾಸನದಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದು, ಬಳಿಕ ಬೀದರ್ ಉಪ ವಿಭಾಗದಲ್ಲಿ ಉಪ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೊಪ್ಪಳ ಜಿಲ್ಲೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ, ರಾಜ್ಯ ಪರೀಕ್ಷಾಂಗ ಪ್ರಾಧಿಕಾರ, ಬೆಂಗಳೂರು ಅಬಕಾರಿ ಇಲಾಖೆಯಲ್ಲಿ ಹೆಚ್ಚುವರಿ ಆಯುಕ್ತರಾಗಿ, ಬೆಂಗಳೂರು ಕೋವಿಡ್ ಕಂಟ್ರೋಲ್ ನೋಡಲ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಈ ಹಿಂದೆ ಕೋಲಾರ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದು, ಇದೀಗ ಕೊಡಗು ಜಿಲ್ಲಾಧಿಕಾರಿಯಾಗಿ ವೆಂಕಟ್ ರಾಜ ಅವರನ್ನು ರಾಜ್ಯ ಸರಕಾರ ನಿಯೋಜಿಸಿದೆ.
ಅಧಿಕಾರ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜ, ಕೊಡಗು ಜಿಲ್ಲೆಯ ಬಗ್ಗೆ ಹೆಮ್ಮೆ ಇದೆ ಎಂದು ಮೆಚ್ಚುಗೆಯ ನುಡಿಯಾಡಿದರು.
ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಸಂದರ್ಭ ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ ಮಳೆಗಾಲ ಎದುರಿಸಲು ಮೊದಲ ಆಧ್ಯತೆ ನೀಡಲಾಗುತ್ತದೆ ಎಂದು ಹೇಳಿದರು. ಈಗಾಗಲೇ ಜಿಲ್ಲಾಧಿಕಾರಿಗಳಾಗಿದ್ದ ಡಾ. ಬಿ.ಸಿ.ಸತೀಶ ಅವರಿಂದಲೂ ಮಳೆಗಾಲದ ಕುರಿತು ಮಾಹಿತಿ ಪಡೆದಿರುವುದಾಗಿ ಹೇಳಿದರು. ಜಿಲ್ಲೆಯ ಸಮಸ್ಯೆಗಳ ಕುರಿತು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆಯುವುದಾಗಿ ತಿಳಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜ, ಜನ ಸ್ನೇಹಿ ಮತ್ತು ಪಾರದರ್ಶಕ ಆಡಳಿತಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಭರವಸೆ ನೀಡಿದರು.









