ಮಡಿಕೇರಿ ಜೂ.21: ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ ಮುಂದುವರೆದಿದ್ದು, ಕಾಫಿ ತೋಟವೊಂದರಲ್ಲಿ ಹಂದಿಯನ್ನು ಹುಲಿ ಭೇಟೆಯಾಡಿದ ಘಟನೆ ನಡೆದಿದೆ.
ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾ.ಪಂ ವ್ಯಾಪ್ತಿಯ ನಾಯಡ ವಿಕ್ಕಿ ಎಂಬವರಿಗೆ ಸೇರಿದ ಕಾಫಿ ತೋಟದಲ್ಲಿ ಹುಲಿ ಹಂದಿಯನ್ನು ಬಲಿಪಡೆದಿದೆ. ಕಾಫಿತೋಟದಲ್ಲಿ ಹಂದಿಯ ಮೇಲೆ ದಾಳಿ ನಡೆಸಿದ ಹುಲಿ ಸುಮಾರು 50ರಿಂದ 55 ಕೆ.ಜಿ. ಭಾರದ ಹಂದಿಯ ಕಳೇಬರವನ್ನು ಸ್ಥಳದಿಂದ ದೂರ ಎಳೆದೊಯ್ದು ಅರ್ಧಂಬರ್ಧ ತಿಂದು ಹಾಕಿದೆ.
ಹುಲಿ ದಾಳಿ ನಡೆಸಿದ ಸ್ಥಳದ ಸಮೀಪದಲ್ಲೇ ಮನೆಗಳಿದ್ದು, ಸ್ಥಳೀಯರಲ್ಲಿ ಆತಂಕ ಸೃಷ್ಟಿಸಿದೆ. ಹುಲಿದಾಳಿ ನಡೆಸಿದ ಸ್ಥಳದಲ್ಲಿ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ವಿರಾಜಪೇಟೆಯ ಅರಣ್ಯ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ, ಕೂಂಬಿಂಗ್ ಕಾರ್ಯಾಚರಣೆ ನಡೆಸಿದರು. ಆದರೆ ಹುಲಿ ಜಾಡು ಮಾತ್ರ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಪತ್ತೆಯಾಗಲಿಲ್ಲ ಎಂದು ತಿಳಿದು ಬಂದಿದೆ.









