ಮಡಿಕೇರಿ ಜೂ.21 : ಎಲ್ಲರೂ ನಮ್ಮ ದೇಶದ ಪರಂಪರೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಬೇಕು ಎಂದು ಬಿ.ಪಿ.ರೇಖಾ ಹೇಳಿದರು.
ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ನಾಪೋಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹಯೋಗದೊಂದಿಗೆ ಏರ್ಪಡಿಸಿದ್ದ ಪರಂಪರೆ ಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪರಂಪರೆ ಅನಾದಿ ಕಾಲ ಘಟದಿಂದಲೂ ಕೂಡಿಕೊಂಡು ಬಂದಿದೆ. ಭಾರತದಲ್ಲಿ ನಡೆದ ಐತಿಹಾಸಿಕ ಘಟನೆಗಳ ಹಿನ್ನಲೆ ಮತ್ತು ಮಹಾನ್ ಪುರುಷರ ಆಚಾರ ವಿಚಾರಗಳು, ಸಿದ್ದಾಂತ ಮತ್ತು ಸಂಸ್ಕೃತಿಗಳನ್ನು ತಿಳಿದುಕೊಳುವುದು ಇಂದಿನ ಕಾಲಘಟದಲ್ಲಿ ಅತ್ಯಂತ ಅವಶ್ಯ ಎಂದರು.
ಪ್ರಾಚೀನ ಮತ್ತು ಪ್ರಚಲಿತ ನಾಣ್ಯಗಳ ಹಾಗೂ ನೋಟುಗಳ ಸಂಗ್ರಹಕಾರ ಕೆ.ಪಿ.ಕೇಶವಮೂರ್ತಿ ಮಾತನಾಡಿ, ನಾಣ್ಯಗಳು ನಮ್ಮ ದೇಶವನ್ನು ಆಳಿದ ರಾಜ ಮನೆತನದ ವೈಭವಕ್ಕೆ ಸಾಕ್ಷಿಯಾಗಿದೆ. ಎಷ್ಟೋ ಇತಿಹಾಸ ಕುರುಹುಗಳನ್ನು ಹುಡುಕಿಕೊಡುವುದರಲ್ಲಿ ಮಹತ್ತರ ಪಾತ್ರವಹಿಸಿದೆ. ಇತಿಹಾಸವನ್ನು ನಾಣ್ಯಗಳ ಸಂಗ್ರಹ ರೂಪದಲ್ಲಿ ಇಂದಿನ ಪೀಳಿಗೆಗೆ ತಿಳಿಸುತ್ತಿರುವುದು ನನ್ನ ಸೌಭಾಗ್ಯವಾಗಿದೆ. ಪ್ರತಿ ವಿದ್ಯಾರ್ಥಿಗಳು ಇತಿಹಾಸ ಅದರ ಪರಂಪರೆಯನ್ನು ಅರಿತುಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲ ಡಾ.ಎನ್.ಪಿ ಕಾವೇರಿ ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಇತಿಹಾಸದ ವಿಷಯಗಳನ್ನೂ ಓದಲೇಬೇಕು. ಹಾಗದರೆ ಮಾತ್ರ ತಮ್ಮ ದೇಶಕ್ಕೆ ತನ್ನದೇಯಾದ ಕೊಡುಗೆ ನೀಡಲು ಸಾಧ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗ ಮುಖ್ಯಸ್ಥರು ಹಾಗೂ ಕಾರ್ಯಕ್ರಮ ಸಂಚಾಲಕ ಟಿ.ಎಲ್.ತ್ಯಾಗರಾಜು, ಐ.ಕ್ಯೂ.ಎ.ಎಸ್ ಸಂಯೋಜಕ ಹೆಚ್.ಎಸ್ ನಂದೀಶ್ ಹಾಜರಿದ್ದರು. ಕಾರ್ಯಕ್ರಮವನ್ನು ವಿದ್ಯಾ ನಡೆಸಿದರು, ಸೀತಮ್ಮ ಸ್ವಾಗತಿಸಿದರೆ, ಜಯಶ್ರೀ ವಂದಿಸಿದರು.
ನಾಣ್ಯಗಳ ಪ್ರದರ್ಶನ :: ಕಾರ್ಯಕ್ರಮದಲ್ಲಿ ಖ್ಯಾತ ಪ್ರಾಚೀನ ಮತ್ತು ಪ್ರಚಲಿತ ನಾಣ್ಯಗಳ ಮತ್ತು ನೋಟುಗಳ ಸಂಗ್ರಹಕಾರ ಕೆ.ಪಿ.ಕೇಶವಮೂರ್ತಿ 152ನೇ ಪ್ರಾಚೀನ ಮತ್ತು ಪ್ರಚಲಿತ ನಾಣ್ಯಗಳ ಮತ್ತು ನೋಟುಗಳ ಪ್ರದರ್ಶನ ಏರ್ಪಡಿಸಿದರು.









