ಮಡಿಕೇರಿ ಜೂ.21 : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸ್ನಾತಕೋತ್ತರ (ಡಿಪ್ಲೊಮಾ) ಯೋಗವಿಜ್ಞಾನ ವಿಭಾಗ, ಎನ್‍ಸಿಸಿ, ಎನ್‍ಎಸ್‍ಎಸ್ ಹಾಗೂ ಕೆನರಾ ಬ್ಯಾಂಕ್ ನ ಸಹಯೋದಲ್ಲಿ ಅಂತರಾಷ್ಟ್ರೀಯ ಯೋಗದಿನಾಚರಣೆಯನ್ನು ಕಾಲೇಜಿನಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಮೇಜರ್ ಡಾ.ಬಿ.ರಾಘವ ಯೋಗಾಭ್ಯಾಸದಿಂದ ದೈಹಿಕ ಕ್ಷಮತೆಯನ್ನು ಪಡೆದುಕೊಳ್ಳಬಹುದು. ಆ ಮೂಲಕ ಶಿಸ್ತುಬದ್ಧ ಬದುಕನ್ನು ನಡೆಸಲು ಸಾಧ್ಯವಾಗುತ್ತದೆ. ಭಾರತೀಯ ಪರಂಪರೆಯಲ್ಲಿ ಯೋಗಾಭ್ಯಾಸಕ್ಕೆ ಮಹತ್ತರವಾದ ಸ್ಥಾನವಿದೆ ಎಂದು ಅಭಿಪ್ರಾಯಪಟ್ಟರು.
ಮಡಿಕೇರಿಯ ಕರ್ನಾಟಕ 19ನೇ ಬಟಾಲಿಯನ್ ನ ಆಡಳಿತ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಚಾಕೋ ವಿ.ಡಿ ಮತ್ತು ಮಡಿಕೇರಿಯ ಕೆನರಾ ಬ್ಯಾಂಕ್ ಪಶ್ಚಿಮ ಶಾಖೆಯ ವ್ಯವಸ್ಥಾಪಕ ಪಿ.ಕೆ.ಅವಿನಾಶ್ ಹಾಜರಿದ್ದರು.
ಪ್ರಾಯೋಗಿಕ ಯೋಗಾಭ್ಯಾಸದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕರಾದ ಡಾ. ಗಾಯತ್ರಿ ಪಾಲ್ಗೊಂಡಿದ್ದರು. ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಸ್ನಾತಕೋತ್ತರ (ಡಿಪ್ಲೊಮಾ) ಯೋಗವಿಜ್ಞಾನ ವಿಭಾಗದ ಸಂಯೋಜಕ ಡಾ. ಎಂ.ಪಿ.ಕೃಷ್ಣ ವಂದಿಸಿದರು.
ಸ್ನಾತಕೋತ್ತರ (ಡಿಪ್ಲೊಮಾ) ಯೋಗವಿಜ್ಞಾನ ವಿಭಾಗದ ಅಧ್ಯಾಪಕ ಎಂ.ಎಸ್.ಗುರುಕಿರಣ್ ಮತ್ತು ಅಖಿಲಾ ಎನ್‍ಸಿಸಿ, ಎನ್‍ಎಸ್‍ಎಸ್ ಹಾಗೂ ಯೋಗ ವಿಜ್ಞಾನದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕವಾಗಿ ಯೋಗಾಸನದ ವಿವಿಧ ಭಂಗಿಗಳನ್ನು ಸಂಯೋಜಿಸಿ ತಿಳಿಸಿಕೊಟ್ಟರು.








