ನಾಪೋಕ್ಲು ಜೂ.26 : ರಾಜ್ಯ ರಸ್ತೆ ಸಾರಿಗೆ ಬಸ್ಸುಗಳು ನಿಗದಿತ ಸಮಯಕ್ಕೆ ಸಂಚರಿಸದೆ ಶಾಲಾ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿಗಳು ನಾಪೋಕ್ಲು ಪೊಲೀಸರಿಗೆ ದೂರು ನೀಡಿದರು.
ಬೆಂಗಳೂರಿನಿಂದ ನಾಪೋಕ್ಲು ಮುಖಾಂತರ ಭಾಗಮಂಡಲಕ್ಕೆ ತೆರಳುವ ಸರ್ಕಾರಿ ಬಸ್ಸುಗಳು ನಿಗದಿತ ಸಮಯಕ್ಕೆ ಬರುತ್ತಿಲ್ಲ. ವಾರದಲ್ಲಿ ಎರಡು ಮೂರು ದಿನಗಳು ಮಾತ್ರ ಸಂಚರಿಸುತ್ತಿದ್ದು ಈ ಬಸ್ಸುಗಳ ಮೂಲಕ ಶಾಲಾ ಕಾಲೇಜುಗಳಿಂದ ತೆರಳುವ ವಿದ್ಯಾರ್ಥಿಗಳಿಗೆ ತೀವ್ರ ಸಮಸ್ಯೆಯಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ನಾಪೋಕ್ಲುವಿನಿಂದ ನೆಲಜಿ, ಬಲಮಾವಟಿ, ಅಯ್ಯಂಗೇರಿ ಮೂಲಕ ಪ್ರತಿನಿತ್ಯ ಸಂಜೆ 4 ಬಸ್ಸುಗಳು ಭಾಗಮಂಡಲಕ್ಕೆ ತೆರಳುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕೆಲವು ಬಸ್ಸುಗಳು ಇಲ್ಲಿಯ ಸಂತೆ ಮೈದಾನದಲ್ಲಿ ಸ್ಥಗಿತಗೊಳಿಸಲಾಗುತ್ತಿದ್ದು ನಿಯಮಿತವಾಗಿ ಸಂಚರಿಸುತ್ತಿಲ್ಲ. ವಾರದಲ್ಲಿ ಎರಡು ಮೂರು ದಿನಗಳು ಮಾತ್ರ ಬರುವುದರಿಂದ ವಿದ್ಯಾರ್ಥಿಗಳು ತೀವ್ರ ಸಮಸ್ಯೆಯನ್ನು ಎದುರಿಸುವಂತಾಗಿದೆ. ನಾಪೋಕ್ಲುವಿಗೆ ತಡವಾಗಿ ಆಗಮಿಸುವ ಬಸ್ಸುಗಳು ಸಂತೆ ಮೈದಾನದಲ್ಲಿ ನಿಲುಗಡೆಗೊಳ್ಳುತ್ತಿವೆ. ಇಲ್ಲಿಂದ ಮುಂದಕ್ಕೆ ತೆರಳುತ್ತಿಲ್ಲ. ನಾವು ಪ್ರತಿನಿತ್ಯ ಬಸ್ಸಿಗಾಗಿ ಕಾದು ಸಮಸ್ಯೆ ಅನುಭವಿಸುವಂತಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದರು.
ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮ ಕೈಗೊಂಡು ಸಮಸ್ಯೆಯನ್ನು ಪರಿಹರಿಸುವಂತೆ ಒತ್ತಾಯಿಸಿದರು.
ಬೇಡಿಕೆಯ ಮನವಿಪತ್ರವನ್ನು ಪೊಲೀಸ್ ಠಾಣಾಧಿಕಾರಿ ಮಂಜುನಾಥ ಅವರಿಗೆ ಸಲ್ಲಿಸಿದರು.
ವರದಿ : ದುಗ್ಗಳ ಸದಾನಂದ