ಸುಂಟಿಕೊಪ್ಪ ಜೂ.28 : ಪ್ರವಾಸಿಗರ ಟೆಂಪೋ ಟ್ರಾವಲರ್ ಹಾಗೂ ಕೂಲಿ ಕಾರ್ಮಿಕರನ್ನು ಕರೆತರುತ್ತಿದ್ದ ಜೀಪ್ ನಡುವೆ ಡಿಕ್ಕಿ ಸಂಭವಿಸಿ ಹಲವರು ಗಾಯಗೊಂಡಿರುವ ಘಟನೆ ಸುಂಟಿಕೊಪ್ಪ ಸಮೀಪ ಗದ್ದೆಹಳ್ಳ ತಿರುವಿನಲ್ಲಿ ನಡೆದಿದೆ.
ಮಡಿಕೇರಿಯ ಅಬ್ಬಿಪಾಲ್ಸ್ ಸಮೀಪದ ತೋಟದಿಂದ ಕಾರ್ಮಿಕರನ್ನು ಸುಂಟಿಕೊಪ್ಪದ ಕಡೆಗೆ ಕರೆದುಕೊಂಡು ಬರುತ್ತಿದ್ದ ಜೀಪ್ ಹಾಗೂ ಮೈಸೂರಿನಿಂದ ಭಾಗಮಂಡಲ, ತಲಕಾವೇರಿಗೆ ಪ್ರವಾಸಿಗರು ಬರುತ್ತಿದ್ದ ಟೆಂಪೋ ಟ್ರಾವಲರ್ ನಡುವೆ ಡಿಕ್ಕಿ ಸಂಭವಿಸಿತು. ಘಟನೆಯಲ್ಲಿ ಜೀಪ್ ನಲ್ಲಿದ್ದ ಸುಂಟಿಕೊಪ್ಪದ ಕಾರ್ಮಿಕರಾದ ಮಂಜುನಾಥ, ರಾಮ, ಜೀಪ್ ಚಾಲಕ ಎನ್.ಮಂಜೇಶ, ಅಸ್ಸಾಂ ಮೂಲದ ಕಾರ್ಮಿಕರಾದ ನಿಸಾಬುಲ್, ಅಬುಸಮ, ಇಜಾರಿ, ಅಕ್ಲೀಮ್, ಅನಾರ್ ಹುಸೈನ್ ಹಾಗೂ ನೂರ್ ಜಾನ್ ಅವರುಗಳು ತೀವ್ರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳಿಗೆ ಸುಂಟಿಕೊಪ್ಪ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಟೆಂಪೋ ಟ್ರಾವಲರ್ ವಾಹನದಲ್ಲಿದ್ದ ಪ್ರವಾಸಿಗರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಸುಂಟಿಕೊಪ್ಪ ಎಎಸ್‌ಐ ಶ್ರೀನಿವಾಸ್ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.










