ಮಡಿಕೇರಿ ಜೂ.28 : ನಿರ್ದೇಶಕ ಜನಾರ್ಧನ್ ನಿರ್ದೇಶನದ `ದೇವರ ಆಟ ಬಲ್ಲವರಾರು’ ಕನ್ನಡ ಸಿನಿಮಾವನ್ನು 30 ದಿನಗಳಲ್ಲಿ ಚಿತ್ರೀಕರಿಸಿ ಬಿಡುಗಡೆ ಮಾಡುವ ಮೂಲಕ ಗಿನ್ನಿಸ್ ದಾಖಲೆಯ ಗುರಿ ಹೊಂದಿದೆ ಎಂದು ಚಿತ್ರತಂಡ ತಿಳಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಜನಾರ್ಧನ್, ಇದೊಂದು ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಮಡಿಕೇರಿ ಸುತ್ತಮುತ್ತ ಸಿನಿಮಾದ ಚಿತ್ರೀಕರಣ ನಡೆಯಲಿದೆ. 30 ದಿನಗಳಲ್ಲಿ ಚಿತ್ರೀಕರಣದ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ. ಆ ಮೂಲಕ ಹೊಸ ಪ್ರಯತ್ನಕ್ಕೆ ಮುಂದಾಗಿದ್ದು, ಇಂದಿನಿಂದಲೇ ಶೂಟಿಂಗ್ ಆರಂಭವಾಗಲಿದೆ ಎಂದು ತಿಳಿಸಿದರು.
ಚಿತ್ರದ ನಾಯಕ ಅರ್ಜುನ್ ರಮೇಶ್ ಮಾತನಾಡಿ, 36 ಗಂಟೆಗಳ ಟೈಮ್ಲೈನ್ ಇಟ್ಟುಕೊಂಡು ಸಿನಿಮಾ ಸೆಟ್ ವರ್ಕ್ ಆರಂಭವಿಸಿದ ಚಿತ್ರ ತಂಡ, ಕೇವಲ 22 ಗಂಟೆಗಳಲ್ಲಿ ನಿಗದಿತ ಸಮಯಕ್ಕಿಂತ ಮೊದಲೇ ಮುಗಿಸಿ ಗಿನ್ನಿಸ್ ಮೊದಲ ಹಂತ ಪೂರ್ಣಗೊಳಿಸಿದೆ ಎಂದು ಮಾಹಿತಿ ನೀಡಿದರು.
200 ಮಂದಿಯನ್ನೊಳಗೊಂಡ ತಂಡವು ಸುಂಟಿಕೊಪ್ಪ ಬಳಿಯ ವಿಶಾಲವಾದ ಜಾಗದಲ್ಲಿ ಹಗಲು ರಾತ್ರಿ ಶ್ರಮ ವಹಿಸಿ 150 ಅಡಿ ಉದ್ದ, 80 ಅಡಿ ಅಗಲ, 19 ಅಡಿ ಎತ್ತರ ವಿಸ್ತೀರ್ಣದ ಬೃಹತ್ ಸೆಟ್ ನಿರ್ಮಾಣ ಮಾಡಿದೆ. 30 ದಿನಗಳಲ್ಲಿ ಸಿನಿಮಾದ ಚಿತ್ರೀಕರಣ ಪೂರ್ಣಗೊಳ್ಳಲಿದ್ದು, ಕನ್ನಡ ಚಿತ್ರರಂಗದಲ್ಲೇ ಇದು ಮೊದಲ ಪ್ರಯತ್ನ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಚಿತ್ರದ ನಿರ್ಮಾಪಕ ಹನುಮಂತರಾಜ್, ಕಲಾ ನಿರ್ದೇಶಕ ಬಾಲಚಂದ್ರ, ಸ್ಟಂಟ್ ಮಾಸ್ಪರ್ ಕುಂಫುಚಂದ್, ಡಿಒಪಿ ಶ್ರೀರಾಮ್ ಉಪಸ್ಥಿತರಿದ್ದರು.