ಮಡಿಕೇರಿ ಜು.6 : ಕೊಡಗು ಜಿಲ್ಲೆಯಲ್ಲಿ ಎಡೆಬಿಡದೆ ಮಳೆಯಾಗುತ್ತಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತ ಜು.7 ರಂದು ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದೆ.
ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ 24 ಗಂಟೆಗಳಲ್ಲಿ ದಾಖಲೆಯ 8 ಇಂಚಿಗೂ ಅಧಿಕ ಮಳೆಯಾಗಿದೆ. ತಲಕಾವೇರಿ ಮತ್ತು ಭಾಗಮಂಡಲ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ತ್ರಿವೇಣಿ ಸಂಗಮ ಭರ್ತಿಯಾಗಿ ನಾಪೋಕ್ಲು ರಸ್ತೆಯನ್ನು ಆವರಿಸಿದೆ. ಶ್ರೀಭಗಂಡೇಶ್ವರ ದೇವಾಲಯದ ಆವರಣ ಮತ್ತು ಮಡಿಕೇರಿ ರಸ್ತೆಗೆ ಪ್ರವಾಹದ ನೀರು ಬರುವ ಸಾಧ್ಯತೆಗಳಿದೆ. ಜನ ಸಂಚಾರ ಕಷ್ಟಸಾಧ್ಯವಾಗಿದ್ದು, ಅಧಿಕಾರಿಗಳು ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದಾರೆ.
ದಕ್ಷಿಣ ಕೊಡಗಿನಲ್ಲೂ ಧಾರಾಕಾರ ಮಳೆಯಾಗುತ್ತಿದ್ದು, ನದಿತೊರೆಗಳು ತುಂಬಿ ಹರಿಯುತ್ತಿವೆ. ಮರಗಳು ಮತ್ತು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
::: ಮರ ಬಿದ್ದು ಹಾನಿ ::: ಸುಂಟಿಕೊಪ್ಪದ ಕಂಬಿಬಾಣೆ ಗ್ರಾಮದಲ್ಲಿ ಮರಿಯಾ ಲಲಿತ ಎಂಬುವವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ವಿದ್ಯುತ್ ಕಂಬಗಳು ಕೂಡ ಬಿದ್ದಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಹೊಸ್ಕೇರಿ ಗ್ರಾ.ಪಂ ವ್ಯಾಪ್ತಿಯ ಅರೆಕಾಡು ಗ್ರಾಮದ ನೇತಾಜಿ ನಗರ ಬಡಾವಣೆಯಲ್ಲಿ ಗುರುರಾಜ್ ಎಂಬುವವರ ಮನೆಯ ಮೇಲೆ ಮರ ಬಿದ್ದು ಹಾನಿಯಾಗಿದೆ. ಸೋಮವಾರಪೇಟೆಯ ಐಗೂರು ಗ್ರಾಮದಲ್ಲಿ ಬೈಕ್ ವೊಂದರ ಮೇಲೆ ಮರ ಬಿದ್ದಿದ್ದು, ಅದೃಷ್ಟವಶಾತ್ ಸವಾರ ಸುನಕ್ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಮಡಿಕೇರಿ, ಕೊಯನಾಡು, ಸಂಪಾಜೆ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಕೊಯನಾಡು ಬಳಿ ಹೆದ್ದಾರಿಗೆ ಹಾನಿಯಾಗುವ ಸಾಧ್ಯತೆ ಕಂಡು ಬಂದಿದೆ. ಮರ ಮತ್ತು ವಿದ್ಯುತ್ ಕಂಬಗಳು ಬೀಳುತ್ತಿರುವುದರಿಂದ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.
::: ರಸ್ತೆಗಳು ಜಲಾವೃತ ::: ಮಡಿಕೇರಿ ನಗರದಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಇರುವುದರಿಂದ ಮಳೆ ನೀರು ಧಾರಾಕಾರವಾಗಿ ರಸ್ತೆಯಲ್ಲೇ ಹರಿದು ಕೆಲವು ಅಂಗಡಿ, ವಾಣಿಜ್ಯ ಮಳಿಗೆಗಳು ಜಲಾವೃತಗೊಂಡವು. ಖಾಸಗಿ ಬಸ್ ನಿಲ್ದಾಣದ ಬಳಿಯ ಇಂದಿರಾ ಕ್ಯಾಂಟೀನ್ ಎದುರಿನ ರಸ್ತೆಯಲ್ಲಿ ಪ್ರವಾಹದ ರೂಪದಲ್ಲಿ ನೀರು ಹರಿದು ವಾಹನ ಹಾಗೂ ಪಾದಾಚಾರಿಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಮುಂದಿನ 24 ಗಂಟೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಎಚ್ಚರಿಕೆಯಿಂದ ಇರುವಂತೆ ಸಲಹೆ ಮಾಡಿದೆ. ಈ ಕಾರಣದಿಂದ ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜುಗಳಿಗೆ ಜಿಲ್ಲಾಡಳಿತ ಜು.7 ರಂದು ರಜೆ ಘೋಷಿಸಿದೆ.