ಮಡಿಕೇರಿ ಜು.14 : ಕೊಡಗು ಜಿಲ್ಲಾ ಕೇಂದ್ರವಾದ ಮಡಿಕೇರಿಯಲ್ಲಿ ರೈಲ್ವೆ ಬುಕ್ಕಿಂಗ್ ಸೆಂಟರ್ ತೆರೆಯುವಂತೆ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಕೊಡಗು ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳು ವೆಂಕಟ್ ರಾಜಾ ಹಾಗೂ ಕೊಡಗು ಜಿಲ್ಲಾ ಅಂಚೆ ಅಧೀಕ್ಷಕರಿಗೆ ಮನವಿ ಸಲ್ಲಿಸಿದ ವೇದಿಕೆಯ ಪ್ರಮುಖರು ಹಾಗೂ ಪದಾಧಿಕಾರಿಗಳು, ಭಾರತೀಯ ಸೇನೆಯಲ್ಲಿ ಕೊಡಗಿನ ಸಾವಿರಾರು ಮಂದಿ ಸೈನಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಫಿ ತೋಟಗಳಲ್ಲಿ ದುಡಿಯಲು ವಿವಿಧ ರಾಜ್ಯಗಳ ಅಸಂಖ್ಯಾತ ಕಾರ್ಮಿಕರು ಜಿಲ್ಲೆಗೆ ಬರುತ್ತಾರೆ. ಮಡಿಕೇರಿಯಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಸೆಂಟರ್ ಇದ್ದಾಗ ಸೈನಿಕರು ಹಾಗೂ ಕಾರ್ಮಿಕರು ತಾವು ತೆರಳಬೇಕಾದ ಪ್ರದೇಶದ ರೈಲ್ವೆ ಟಿಕೆಟ್ಗಳನ್ನು ಮುಂಗಡವಾಗಿ ಬುಕ್ ಮಾಡಿ ಪ್ರಯಾಣ ಬೆಳೆಸುತ್ತಿದ್ದರು. ಇದು ಹೆಚ್ಚು ಅನುಕೂಲಕರ ವ್ಯವಸ್ಥೆಯಾಗಿತ್ತು, ಆದರೆ ಪ್ರಸ್ತುತ ದಿನಗಳಲ್ಲಿ ಟಿಕೆಟ್ ಬುಕ್ಕಿಂಗ್ಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗಮನ ಸೆಳೆದರು.
ಈ ಸಂದಭ ವೇದಿಕೆಯ ಅಧ್ಯಕ್ಷ ರವಿ ಗೌಡ ಮಾತನಾಡಿ, ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿಯ ಹಳೆಯ ಖಾಸಗಿ ಬಸ್ ನಿಲ್ದಾಣದ ನಗರಸಭಾ ಮಳಿಗೆಯೊಂದರಲ್ಲಿ ಹಲವು ವರ್ಷಗಳ ಹಿಂದೆ ರೈಲ್ವೆ ಬುಕ್ಕಿಂಗ್ ಸೆಂಟರ್ ನ್ನು ತೆರೆಯಲಾಗಿತ್ತು. ಆದರೆ 2018ರ ಪ್ರಾಕೃತಿಕ ವಿಕೋಪ ಹಾಗೂ ಎರಡು ವರ್ಷಗಳ ಕೋವಿಡ್ ಸೋಂಕಿನ ಸಂದರ್ಭ ಮುಚ್ಚಲ್ಪಟ್ಟ ನೈರುತ್ಯ ರೈಲ್ವೆ ಟಿಕೆಟ್ ಬುಕಿಂಗ್ ಸೆಂಟರ್ ಇದುವರೆಗೂ ತೆರೆದಿಲ್ಲ ಎಂದರು.
ಪ್ರಸ್ತುತ ದಿನಗಳಲ್ಲಿ ಮಡಿಕೇರಿ ನಗರ ಹಾಗೂ ಗ್ರಾಮೀಣ ಪ್ರದೇಶದವರಿಗೆ ಟಿಕೆಟ್ ಬುಕಿಂಗ್ ಗೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಅಧಿಕಾರಿಗಳ ಗಮನಕ್ಕೆ ತಂದರು.
ಮನವಿ ಸ್ವೀಕರಿಸಿ ಮಾತನಾಡಿದ ಅಧಿಕಾರಿಗಳು ಆದಷ್ಟು ಬೇಗ ಇದರ ಬಗ್ಗೆ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ವೇದಿಕೆಯ ಪ್ರಧಾನ ಕಾರ್ಯದರ್ಶಿ ಮೀನಾಜ್ ಪ್ರವೀಣ್, ಮಡಿಕೇರಿ ತಾಲೂಕು ಅಧ್ಯಕ್ಷ ನಾಗೇಶ್, ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ಪ್ರಸಾದ್, ಪ್ರಧಾನ ಕಾರ್ಯದರ್ಶಿ ಪೂರ್ಣಿಮಾ, ನಿರ್ದೇಶಕಿ ಲಿಲ್ಲಿಗೌಡ ಹಾಗೂ ಸದಸ್ಯರುಗಳು ಈ ಸಂದರ್ಭ ಹಾಜರಿದ್ದರು.