
ಮೂರ್ನಾಡು ಸೆ.1 NEWS DESK : ಮೂರ್ನಾಡು ಸಹಕಾರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ 102ನೇ ವಾರ್ಷಿಕ ಕೈಲ್ ಪೊಳ್ದ್ ಹಬ್ಬದ ಅಂಗವಾಗಿ ಆಟೋಟಗಳ ಕಾರ್ಯಕ್ರಮವು ಸೆ.3ರಂದು ನಡೆಯಲಿದೆ. ಮೂರ್ನಾಡು ವಿದ್ಯಾಸಂಸ್ಥೆಯ ಬಾಚೆಟ್ಟಿರ ಲಾಲು ಮುದ್ದಯ್ಯ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿರುವ ಆಟೋಟಗಳ ಕಾರ್ಯಕ್ರಮವನ್ನು ಅಪರಾಹ್ನ 1.30 ಗಂಟೆಗೆ ಕೊಡಂಬೂರು ಕಾಫಿ ಬೆಳೆಗಾರ ಬಡುವಂಡ ಬಿ. ಮುತ್ತಪ್ಪ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗಾಗಿ ತೆಂಗಿನಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ, ಮಹನೀಯರು, ಮಹಿಳೆಯರು ಹಾಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಓಟದ ಸ್ಪರ್ಧೆಗಳು ನಡೆಯಲಿವೆ. ಅಲ್ಲದೆ, ಬಾಂಬ್ ಇನ್ ದಿ ಸಿಟಿ, ಭಾರದ ಕಲ್ಲು ಎಸೆತ, ನಿಂಬೆಹಣ್ಣು-ಚಮಚ ಓಟ, ವಾದ್ಯದ ಕುಣಿತ ಹಾಗೂ ಹಗ್ಗಜಗ್ಗಾಟ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅಪರಾಹ್ನ 5.30 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಖ್ಯಾತ ಮಕ್ಕಳ ತಜ್ಞ ಡಾ. ಕೆಂಬಡತಂಡ ಗೌರವ್ ಅಯ್ಯಪ್ಪ ಹಾಗೂ ಮಡಿಕೇರಿ ವೈದ್ಯಕೀಯ ವಿದ್ಯಾಲಯದ ಖ್ಯಾತ ಅರಿವಳಿಕೆ ತಜ್ಞ ಡಾ. ದಂಬೆಕೋಡಿ ಎಸ್. ಅಯ್ಯಪ್ಪ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಹಕಾರ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಮುಂಡಂಡ ಪವಿ ಸೋಮಣ್ಣ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ.
ವರದಿ : ಟಿ.ಸಿ. ನಾಗರಾಜ್, ಮೂರ್ನಾಡು









