ಮಡಿಕೇರಿ ಜು.19 : ಜಾನುವಾರುಗಳನ್ನು ಭಕ್ಷಿಸಿ ಅಪಾರ ನಷ್ಟ ಉಂಟು ಮಾಡುವ ಮೂಲಕ ಹುಣುಸೂರು ತಾಲ್ಲೂಕಿನ ವದ್ಲಿಮನುಗನಹಳ್ಳಿ ಗ್ರಾಮದಲ್ಲಿ ಆತಂಕ ಮೂಡಿಸಿದ್ದ ಚಿರತೆ ಕೊನೆಗೂ ಸೆರೆಯಾಗಿದೆ.
ಅನೇಕ ಮೇಕೆ ಹಾಗೂ ಬೀದಿ ನಾಯಿಗಳನ್ನು ತಿಂದು ಹಾಕಿದ್ದ ಚಿರತೆಯ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸಿತು. ಮೂರು ದಿನಗಳ ಹಿಂದೆ ಗ್ರಾಮದ ಕುಮಾರ ನಾಯಕ ಎಂಬುವವರ ಜಮೀನಿನಲ್ಲಿ ಮೇಯಲು ಬಿಟ್ಟಿದ್ದ ಮೇಕೆಯನ್ನು ಚಿರತೆ ಕೊಂದು ಹಾಕಿತ್ತು. ಉಳಿದ ಮೇಕೆ ಮಾಂಸವನ್ನು ಬೋನಿನಲ್ಲಿಟ್ಟು ಸೆರೆಗಾಗಿ ತಂತ್ರ ರೂಪಿಸಲಾಗಿತ್ತು. ಮಾಂಸ ತಿನ್ನಲು ಬಂದ 4 ವರ್ಷದ ಹೆಣ್ಣು ಚಿರತೆ ಕೊನೆಗೂ ಬಂಧಿಯಾಯಿತು. ಸೆರೆಸಿಕ್ಕ ಚಿರತೆಯನ್ನು ನಾಗರಹೊಳೆ ಉದ್ಯಾನವನಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.








