ನವದೆಹಲಿ ಜು.20 : ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಪರೇಡ್ ಮಾಡಿಸಿದ ಘಟನೆ 140 ಕೋಟಿ ಭಾರತೀಯರಿಗೆ ಮಾಡಿದ ಅವಮಾನ ಎಂದು ಪ್ರಧಾನಮಂತ್ರಿ ನರೇಂದ್ರಮೋದಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪಿತಸ್ಥರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ, ಕಠಿಣ ಶಿಕ್ಷೆಯಾಗಲಿದೆ ಎಂದರು.
ಈ ಪ್ರಕರಣದಲ್ಲಿ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದೆ. ವಿಷಯ ಕೇಳಿ ನನ್ನ ಹೃದಯ ತುಂಬಾ ನೋವಾಗಿದ್ದು, ಸಿಟ್ಟಿನಿಂದ ಕುದಿಯುತ್ತಿದೆ. ಮಣಿಪುರದ ಘಟನೆ ಯಾವುದೇ ಸುಸಂಸ್ಕೃತ ಸಮಾಜಕ್ಕೆ ನಾಚಿಕೆಗೇಡಿನ ವಿಚಾರವಾಗಿದೆ. ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕೆಂದು ಹೇಳಿದರು.
ವಿಶೇಷವಾಗಿ ಮಹಿಳೆಯರ ಸುರಕ್ಷತೆಗಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ತಿಳಿಸಿದರು.








