ಮಡಿಕೇರಿ ಜು.21 : ನಗರಸಭೆ ವ್ಯಾಪ್ತಿಯ ಹಿಲ್ ರಸ್ತೆಯ ಹಿರಿಯ ಪ್ರಾಥಮಿಕ ಶಾಲೆಗೆ ಖಾಯಂ ಶಿಕ್ಷಕರನ್ನು ನೇಮಕ ಮಾಡಬೇಕೆಂದು ಮಡಿಕೇರಿ ನಗರ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಒತ್ತಾಯಿಸಿದೆ.
ನಗರಸಭೆ ಪೌರಾಯುಕ್ತ ವಿಜಯ ಅವರಿಗೆ ಮನವಿ ಸಲ್ಲಿಸಿದ ಘಟಕದ ಪದಾಧಿಕಾರಿಗಳು, ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದರು.
ಈ ಸಂದರ್ಭ ಮಾತನಾಡಿದ ಅಲ್ಪಸಂಖ್ಯಾತರ ಘಟಕದ ನಗರಾಧ್ಯಕ್ಷ ಕೆ.ಜಿ.ಪೀಟರ್, ನಗರದ ಹಿಲ್ ರಸ್ತೆಯ ಹಿರಿಯ ಪ್ರಾಥಮಿಕ ಶಾಲೆಯು 1918ರಲ್ಲಿ ಸ್ಥಾಪನೆಯಾಗಿ 105 ವರ್ಷ ಕಳೆದಿದೆ. ಇಲ್ಲಿ ವ್ಯಾಸಂಗ ಮಾಡಿದ ಸಾವಿರಾರು ವಿದ್ಯಾರ್ಥಿಗಳು ಉನ್ನತ ಹುದ್ದೆಯನ್ನು ಅಲಂಕರಿಸಿದ್ದಾರೆ.
ಆದರೆ ಪ್ರಸ್ತುತ ಶಾಲೆಗೆ ಒಬ್ಬರೇ ಖಾಯಂ ಶಿಕ್ಷಕರಿದ್ದು, ಇವರು ಇದೇ ಜು.31ಕ್ಕೆ ನಿವೃತ್ತಿಯಾಗಲಿದ್ದಾರೆ. ಮುಂದಿನ ದಿನಗಳಲ್ಲಿ ಈ ಶಾಲೆಯಲ್ಲಿ ಖಾಯಂ ಶಿಕ್ಷಕರ ಕೊರತೆ ಎದುರಾಗಲಿದೆ. ಬಡ ವಿದ್ಯಾರ್ಥಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಓದುತ್ತಿದ್ದು, ಖಾಯಂ ಶಿಕ್ಷಕರ ಅವಶ್ಯಕತೆ ಇದೆ. ಆದುದ್ದರಿಂದ ಸರ್ಕಾರದ ಮೂಲಕ ಖಾಯಂ ಶಿಕ್ಷಕರನ್ನು ನೇಮಕ ಮಾಡಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಬೇಕು ಮತ್ತು ಕಳೆದ ಅನೇಕ ವರ್ಷಗಳಿಂದ ಶಾಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಗೌರವ ಶಿಕ್ಷಕರನ್ನು ಹುದ್ದೆಯಲ್ಲಿ ಮುಂದುವರೆಸಬೇಕೆಂದು ಮನವಿ ಮಾಡಿದರು.
ಮನವಿ ಸಲ್ಲಿಸುವ ಸಂದರ್ಭ ಅಲ್ಪಸಂಖ್ಯಾತರ ಘಟಕದ ಉಪಾಧ್ಯಕ್ಷ ಎಂ.ಇ.ಫಾರೂಕ್, ಸಮಾಜ ಸೇವಕರಾದ ಸಮೀರ್, ಹೆಚ್.ಆರ್.ವಿನು ಹಾಗೂ ವಿ.ಎಸ್.ಮಧು ಕುಮಾರ್ ಹಾಜರಿದ್ದರು.







