
ವಿರಾಜಪೇಟೆ ಜೂ.22 NEWS DESK : ಬೆಂಗಳೂರು ಯೂನಿವರ್ಸಿಟಿಯಲ್ಲಿ ನಡೆದ ಅಂತರಾಷ್ಟ್ರೀಯ ಮಟ್ಟದ ನೈಸರ್ಗಿಕ ದೇಹದಾರ್ಢ್ಯ ಸ್ಪರ್ಧೆಯಲ್ಲಿ ವಿರಾಜಪೇಟೆಯ ಸಾಧಕ ಪ್ರಜ್ವಲ್ ವಿ.ಎಂ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದರು. ವಿರಾಜಪೇಟೆ ಗಾಂಧಿನಗರ ನಿವಾಸಿಗಳಾದ ಪಿ.ಎ.ಮಂಜುನಾಥ್ ಹಾಗೂ ಸಂತ ಅನ್ನಮ್ಮ ಕಾಲೇಜಿನ ಉಪನ್ಯಾಸಕಿ ಅಶ್ವಿನಿ ದಂಪತಿಯ ಪುತ್ರನಾಗಿರುವ ಪ್ರಜ್ವಲ್, ಸಂತ ಅನ್ನಮ್ಮ ಕಾಲೇಜಿನಲ್ಲಿ 2ನೇ ಪಿಯುಸಿ ವ್ಯಾಸಂಗ ಮಾಡುತ್ತಿದ್ದಾರೆ. 13 ರಿಂದ 19 ವರ್ಷ ವಯೋಮಾನದ ವಿಭಾಗದಲ್ಲಿ ಅವರು ಸ್ಪರ್ಧಿಸಿದ್ದರು. ವಿರಾಜಪೇಟೆ ತೆಲುಗುರ ಬೀದಿಯ ರೀಶೆಪ್ ಫಿಟ್ನೆಸ್ ಜಿಮ್ ಮಾಲೀಕರು ಹಾಗೂ ತರಬೇತುದಾರರಾಗಿರುವ ಲಕ್ಷ್ಮೀಶ್ ಮತ್ತು ಮೈಸೂರಿನ ಅರ್ನಾಲ್ಡ್ ಫಿಟ್ನೆಸ್ ಸೆಂಟರ್ ತರಬೇತುದಾರ ರವಿ ಅವರು ಪ್ರಜ್ವಲ್ ಅವರಿಗೆ ತರಬೇತಿ ನೀಡಿ ಮಾರ್ಗದರ್ಶನ ಮಾಡಿದ್ದರು. ಸ್ಟೆರಾಯ್ಡ್ ಮುಕ್ತ, ಶುದ್ಧ ಆಹಾರ ಮತ್ತು ಕಠಿಣ ಪರಿಶ್ರಮದ ಮೂಲಕ ದೇಹ ದಾಢ್ರ್ಯ ಸಾಧಿಸುವ ನೈಸರ್ಗಿಕ ದೇಹದಾರ್ಢ್ಯ ಕ್ಷೇತ್ರದಲ್ಲಿ ಪಿಯುಸಿ ಓದುತ್ತಲೇ ಇಂತಹ ಅಂತರಾಷ್ಟ್ರೀಯ ವೇದಿಕೆ ಏರಿರುವುದು ಕೊಡಗು ಜಿಲ್ಲೆಗೆ ಹೆಮ್ಮೆಯ ವಿಷಯವಾಗಿದೆ. ಪ್ರಜ್ವಲ್ ಅವರ ಸಾಧನೆಗೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.









