ನಾಪೋಕ್ಲು ಜು.23 : ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಪದವಿ ಪೂರ್ವ ಮತ್ತು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆ ವತಿಯಿಂದ ಕಾನೂನು ಅರಿವು ಕಾರ್ಯಕ್ರಮ ನಡೆಯಿತು.
ಶಾಲೆಯ ಸಭಾಂಗಣದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ನಾಪೋಕ್ಲು ಠಾಣಾಧಿಕಾರಿ ಮಂಜುನಾಥ್ ವಿದ್ಯಾರ್ಥಿಗಳಿಗೆ ಕಾನೂನು ಅಂದರೆ ಏನು? ಕಾನೂನು ಉಲ್ಲಂಘಿಸಿದವರಿಗೆ ಆಗುವ ಶಿಕ್ಷೆಯ ಬಗ್ಗೆ ಮಾಹಿತಿನೀಡಿದರು.ಶಿಕ್ಷಣದ ಮಹತ್ವದ ಮೂಲಕ ಗಳಿಸಿಕೊಳ್ಳುವ ಜ್ಞಾನ, ಕಟ್ಟಿಕೊಳ್ಳುವ ಬದುಕು, ರೂಡಿಸಿಕೊಳ್ಳಬೇಕಾದ ಮೌಲ್ಯಗಳು, ಮಾನವೀಯತೆಯ ಮನೋಭಾವದ ಬಗ್ಗೆ ತಿಳಿಸಿದರು. ಮಾದಕ ವಸ್ತುಗಳ ಬಳಕೆಯಿಂದ ಹಾಗುವ ದುಷ್ಪರಿಣಾಮ ಮತ್ತು ಅದನ್ನು ಬಳಸುವ, ಸರಬರಾಜು ಮಾಡುವವರಿಗೆ ಶಿಕ್ಷೆ ಮತ್ತು ದಂಡಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟ ಅವರು ಮೊಬೈಲ್ ಬಳಸುವುದರಿಂದ ಆಗುವ ಸಾಧಕ ಬಾದಕಗಳ ಬಗ್ಗೆ ಕೂಡ ಮಾಹಿತಿ ನೀಡಿ ಎಲ್ಲಾ ವಿದ್ಯಾರ್ಥಿಗಳು ಕಾನೂನನ್ನು ಪರಿಪಾಲಿಸಿ ಉಲ್ಲಂಘನೆ ಮಾಡದೆ ಶಿಸ್ತಿನಿಂದ ಶಿಕ್ಷಣವನ್ನು ಪಡೆದುಕೊಂಡು ಉಜ್ವಲ ಭವಿಷ್ಯ ರೂಪಿಸಬೇಕೆಂದು ಕರೆ ನೀಡಿದರು.
ಪೊಲೀಸ್ ಸಿಬ್ಬಂದಿ ಲವಕುಮಾರ್ ಮಾತನಾಡಿ ವಿದ್ಯಾರ್ಥಿಗಳು ರಸ್ತೆಯ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕು. ಕಾಲೇಜಿನ ನೀತಿ ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಿ ಸುಸಂಸ್ಕೃತರಾಗಿ ಬಾಳಿ ಎಂದು ಕಿವಿಮಾತು ಹೇಳಿದ ಅವರು ಕಾನೂನನ್ನು ಉಲ್ಲಂಘನೆ ಮಾಡಿದಲ್ಲಿ ಶಿಕ್ಷೆಗೆ ಗುರಿಯಾಗುತ್ತೀರಿ ಶಿಕ್ಷಕರ ಬೆತ್ತದೇಟಿಗೆ ಸುಧಾರಿಸದಿದ್ದಲ್ಲಿ ಮುಂದೊಂದು ದಿನ ಪೊಲೀಸರ ಲಾಠಿ ಏಟು ತಿನ್ನಬೇಕಾಗುತ್ತದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತ ಮಂಡಳಿ ಉಪಾಧ್ಯಕ್ಷ ಕೆ.ಎ. ಹಾರಿಸ್ ಗಿಡವಾಗಿ ಬಗ್ಗದು ಮರವಾಗಿ ಬಗ್ಗಲು ಅಸಾಧ್ಯ,ಆದ್ದರಿಂದ ವಿದ್ಯಾರ್ಥಿಗಳು ಅಮಲು ಪದಾರ್ಥವೆಸನಿಗಳ ಕೆಟ್ಟ ವ್ಯಕ್ತಿಗಳ ಸಹವಾಸ ಮಾಡದೆ ಶಿಸ್ತು, ಸಹನೆ, ಸುಚಿತ್ವ ಮೈಗೂಡಿಸಿಕೊಂಡು ಶಿಕ್ಷಕರಿಗೆ ಹಿರಿಯರಿಗೆ ಗೌರವ ನೀಡಿ ಶ್ರದ್ಧೆಯಿಂದ ವಿದ್ಯಭ್ಯಾಸ ಮಾಡಿದರೆ ಮಾತ್ರ ತಮ್ಮ ಭವಿಷ್ಯ ಉಜ್ಜಲವಾಗಲು ಸಾದ್ಯ,
ಎಲ್ಲವನ್ನು ಮರಳಿ ಪಡೆಯಬಹುದು ಆದರೆ ಕಳೆದು ಹೋದ ಈ ಅಮೂಲ್ಯವಾದ ಸಮಯವನ್ನು ಮಾತ್ರ ಮರಳಿ ಪಡೆಯಲು ಸಾಧ್ಯವಿಲ್ಲ ಎಂದರು. ಸತ್ಯವನ್ನು ಮನಗೊಂಡು ಈಗಾಗಲೇ ನಿಮ್ಮಲ್ಲಿ ಕಂಡುಬರುವ ಕೆಟ್ಟ ಅಭ್ಯಾಸಗಳಿಗೆ ತಿಲಾಂಜಲಿ ಹಾಕಿ ಶಿಸ್ತಿನ ಸಿಪಾಯಿಗಳಾಗಿ ಜೀವನ ಉದ್ದಕ್ಕೂ ಬಾಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಪ್ರಭಾರ ಪ್ರಾಂಶುಪಾಲೆ ವಿಜಿತ, ಉಪ ಪ್ರಾಂಶುಪಾಲ ಶಿವಣ್ಣ, ಎಸ್ ಡಿಎಂಸಿ ಸದಸ್ಯರಾದ ಬೊಳ್ಳೆಪಂಡ ಹರೀಶ್, ಶಶಿ ಮಂದಣ್ಣ, ಅಬ್ದುಲ್ ಖಾದರ್, ಮುಜೀಬ್, ಅಶ್ರಫ್, ಉಪನ್ಯಾಸಕರು, ಶಿಕ್ಷಕರು,ವಿದ್ಯಾರ್ಥಿಗಳು, ಶಾಲೆಯ ಸಿಬ್ಬಂದಿಗಳು ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಶಿಕ್ಷಕಿ ಕೆ.ಬಿ. ಉಷಾರಾಣಿ ನಿರೂಪಿಸಿದರು. ಪ್ರಭಾರ ಪ್ರಾಂಶುಪಾಲೆ ವಿಜಿತ ಸ್ವಾಗತಿಸಿ, ಪ್ರಭಾರ ಉಪಪ್ರಾಂಶುಪಾಲ ಶಿವಣ್ಣ ವಂದಿಸಿದರು. (ವರದಿ : ಝಕರಿಯ ನಾಪೋಕ್ಲು)