ಮಡಿಕೇರಿ, ಜು.23: ಜಿಲ್ಲೆಯ ಪತ್ರಕರ್ತರಿಗೆ ನಿವೇಶನ ಒದಗಿಸುವ ಬೇಡಿಕೆಗೆ ಸ್ಪಂದಿಸುತ್ತೇನೆ. ಸರಕಾರ ಮಟ್ಟದಲ್ಲಿ ಈ ಬಗ್ಗೆ ಚರ್ಚಿಸುತ್ತೇನೆ ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಅಜ್ಜಿಕುಟ್ಟೀರ ಎಸ್. ಪೊನ್ನಣ್ಣ ಭರವಸೆ ನೀಡಿದರು.
ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಹಾಗೂ ಮಹಾಸಭೆ ಕಾರ್ಯಕ್ರಮ ನಗರದ ಪತ್ರಿಕಾ ಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಪೊನ್ನಣ್ಣ ಅವರು, ಮಾಧ್ಯಮ ಸಂಸ್ಥೆ ಮುನ್ನಡೆಸುವುದು ಸವಾಲಿನ ಕೆಲಸ. ಸಂಸ್ಥೆಗಳು ಆರ್ಥಿಕ ಸಂಕಷ್ಟದ ನಡುವೆ ಕೆಲಸ ಮಾಡುತ್ತಿವೆ. ಜಿಲ್ಲಾ ಮಟ್ಟದಲ್ಲಿಯೂ ಪತ್ರಕರ್ತರು ಸಂಕಷ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆಗಳ ನಡುವೆ ಪತ್ರಕರ್ತರು ಬದ್ಧತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಹೆಸರು ಗಳಿಸಿದ ಪತ್ರಿಕೆಯೊಂದು ನಷ್ಟದಿಂದ ವಾರಗಳ ಕಾಲ ಸ್ಥಗಿತಗೊಂಡಿತ್ತು. ಅಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ವಾರ್ತಾ ಇಲಾಖೆ ಮೂಲಕ ಕಚ್ಛಾವಸ್ತು ಖರೀದಿಗೆ ನೆರವು ನೀಡಿದ್ದರು. ಆದರೆ, ಕುಮಾರಸ್ವಾಮಿ ವಿರುದ್ಧವೇ ಮುಖಪುಟದಲ್ಲಿ ವರದಿ ಪ್ರಕಟವಾಗಿತ್ತು. ಇದು ಮಾಧ್ಯಮದ ಜವಾಬ್ದಾರಿ ಪ್ರದರ್ಶಿಸುತ್ತದೆ. ಆಸಕ್ತಿ, ಜನಪರ ಕಾಳಜಿ ಇದ್ದರೆ ಮಾತ್ರ ಪತ್ರಕರ್ತನಾಗಲು ಸಾಧ್ಯ. ತಾನು ಮುಖ್ಯಮಂತ್ರಿಗಳೊಂದಿಗೆ ನಿಕಟ ಸಂಪರ್ಕದಲ್ಲಿರಬಹುದು. ಆದರೆ, ತನಗೆ ಕ್ಷೇತ್ರದ ಜನರು ಮುಖ್ಯ. ಈ ಹಿನ್ನೆಲೆ ಕ್ಷೇತ್ರದಲ್ಲಿ ಹೆಚ್ಚಾಗಿ ಇರುತ್ತೇನೆ. ವರದಿಗಾರಿಕೆಯನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಶ್ಲಾಘನೀಯ. ಸಂಘಟಿತರಾಗಿ ಕೆಲಸ ಮಾಡಿದರೆ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ ಎಂದರು.
ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮುಖ್ಯಭಾಷಣಗಾರರಾಗಿ ಪಾಲ್ಗೊಂಡು ಮಾತನಾಡಿ, ಪತ್ರಕರ್ತ ವೃತ್ತಿ ಶೋಕಿ ಅಲ್ಲ. ಸಾಮಾಜಿಕ ಬದ್ಧತೆ ಇರಬೇಕು. ಪತ್ರಕರ್ತರು ದಾರ್ಶನಿಕವಾಗಿರಬೇಕೆಂದು ಸಮಾಜ ಬಯಸುತ್ತದೆ. ಈ ರೀತಿ ನಾವು ನಡೆದರೆ ಜನರು ನಮ್ಮನ್ನು ಉನ್ನತ ಸ್ಥಾನದಲ್ಲಿಡುತ್ತಾರೆ. ಜವಾಬ್ದಾರಿಯಿಂದ ವಿಮುಖರಾದರೆ ವೃತ್ತಿ ಬದ್ಧತೆ ಉಳಿಸಿಕೊಳ್ಳಲಾಗುವುದಿಲ್ಲ. ಇಂದು ಜೊಳ್ಳು ಪತ್ರಕರ್ತರು ಹೆಚ್ಚಾಗುತ್ತಿದ್ದಾರೆ. ಧಾವಂತದಲ್ಲಿ ವೃತ್ತಿಗೆ ಬಂದು ಬೇರೆ ಮಾರ್ಗದಲ್ಲಿ ಹೋಗುತ್ತಿರುವುದು ವಿಷಾದನೀಯ. ವೃತ್ತಿಗೆ ನ್ಯಾಯ ಕೊಡುವುದರೊಂದಿಗೆ ಸಮಾಜಕ್ಕೆ ಬೆಳಕಾಗಿ ನೊಂದವರಿಗೆ ಧನಿಯಾಗಬೇಕು ಎಂದು ಕರೆ ನೀಡಿದ ಅವರು, ‘ಬ್ಲ್ಯಾಕ್ ಮೇಲ್’ ಹಾಗೂ ‘ಐಡಿಂಟೆಟಿ’ಗಾಗಿ ಬರುವವರು ಹೆಚ್ಚಾಗಿದ್ದಾರೆ. ವೃತ್ತಿಯನ್ನು ಗಂಭೀರವಾಗಿ ಪರಿಗಣಿಸದಿದ್ದಲ್ಲಿ ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಸರ್ವೋಚ್ಛ ನ್ಯಾಯಾಧೀಶರೆ ನ್ಯಾಯಾದಾನ ವಿಚಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಇದು ಪತ್ರಿಕಾರಂಗದ ವಿಶ್ವಾಸರ್ಹತೆಯನ್ನು ಸಾಬೀತುಪಡಿಸುತ್ತದೆ. ಸುದ್ದಿಗಳು ಇಂದು ಸುಲಭವಾಗಿ ದೊರೆಯುತ್ತದೆ. ಆದರೆ, ನೈಜಾಂಶ ಪರಿಶೀಲಿಸಿ ವರದಿ ಮಾಡಬೇಕಾದ ಸವಾಲಿದೆ. ಸುದ್ದಿಯನ್ನು ಹೆಕ್ಕಿತೆಗೆಯುವ ಜಾಣ್ಮೆ ಹಾಗೂ ತಾಳ್ಮೆ ಪತ್ರಕರ್ತರಿಗೆ ಇರಬೇಕು ಎಂದ ಸಲಹೆ ನೀಡಿದರು.
ಸುಳ್ಳು ಸುದ್ದಿಗಳನ್ನು ಹರಡುವವರ ವಿರುದ್ಧ ಕ್ರಮಕೈಗೊಳ್ಳುವ ಕಾನೂನು ರೂಪುಗೊಳ್ಳುವ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ ತೇಲಪಂಡ ಶಿವಕುಮಾರ್ ನಾಣಯ್ಯ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪತ್ರಿಕಾ ಕ್ಷೇತ್ರ ಪ್ರಮುಖ ಅಂಗ. ಅಧುನೀಕ ಕಾಲಘಟ್ಟದಲ್ಲಿ ಪತ್ರಕರ್ತರು ಆತ್ಮಾವಲೋಕನದ ಮಾಡಿಕೊಳ್ಳುವ ಅಗತ್ಯ ಇದೆ. ಪತ್ರಕರ್ತರು ಸಮಾಜದ ಕನ್ನಡಿ. ಪ್ರಭಾವಕ್ಕೆ ಒಳಗಾಗಿ ಕೆಲವೊಂದು ಸುದ್ದಿಗಳು ನೈಜಾಂಶ ಕಳೆದುಕೊಂಡಿವೆ. ಪತ್ರಕರ್ತರು ಜಿಲ್ಲೆಯ ಸಮಸ್ಯೆಯ ಬಗ್ಗೆ ವರದಿ ಮೂಲಕ ಸರಕಾರವನ್ನು ಎಚ್ಚರಿಸಸಬೇಕೆಂದು ಹೇಳಿದರು.
ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಪತ್ರಕರ್ತರು ಸಂಕಷ್ಟದಲ್ಲಿ, ಸವಾಲಿನ ನಡುವೆ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಪತ್ರಕರ್ತರಿಗೆ ನಿವೇಶನ ದೊರಕಬೇಕು. ಶಾಸಕರು ಈ ಬೇಡಿಕೆಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದ ಅವರು, ವರದಿ ಮೂಲಕ ಸಮಾಜದ ಸಮಸ್ಯೆಗಳನ್ನು ಪರಿಹರಿಸುವ ಶಕ್ತಿ ಪತ್ರಕರ್ತರಿಗಿದೆ ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ ಮಾತನಾಡಿ, ಪತ್ರಕರ್ತರು ವಿಶೇಷ ವರದಿಗಳ ಮೂಲಕ ಗಮನ ಸೆಳೆಯುವ ಕೆಲಸ ಮಾಡಬೇಕು. ಪ್ರಶಸ್ತಿಗಳಿಂದ ಗೌರವ ಹೆಚ್ಚಾಗುವುದರ ಜೊತೆಗೆ ವೃತ್ತಿಯಲ್ಲಿ ಪ್ರವರ್ಧಮಾನಕ್ಕೆ ಹೋಗಬಹುದು ಎಂದು ಕಿವಿಮಾತನಾಡಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸಮಿತಿ ಸದಸ್ಯ ಸುನಿಲ್ ಪೊನ್ನೇಟ್ಟಿ, ರಾಜ್ಯ ಸಮಿತಿ ಸದಸ್ಯ ಟಿ.ಎನ್. ಮಂಜುನಾಥ್ ಇದ್ದರು.
ಚನ್ನನಾಯಕ್ ಪ್ರಾರ್ಥಿಸಿ, ಆನಂದ್ ಕೊಡಗು, ಕಿಶೋರ್ ರೈ ಕತ್ತಲೆಕಾಡು ನಿರೂಪಿಸಿ, ಅನುಕಾರ್ಯಪ್ಪ ಸ್ವಾಗತಿಸಿ, ವಾಸು ಆಚಾರ್ಯ ವಂದಿಸಿದರು.
ಪ್ರಶಸ್ತಿ ಪ್ರದಾನ : ವಾರ್ಷಿಕ ಪ್ರಶಸ್ತಿಯನ್ನು 17 ಪತ್ರಕರ್ತರು ಪಡೆದುಕೊಂಡರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನೀಡಲಾಗುವ ಪಂದ್ಯಂಡ ಬೆಳ್ಯಪ್ಪ ಸ್ಮರಣಾರ್ಥ ಅತ್ಯುತ್ತಮ ಗ್ರಾಮೀಣ ವರದಿಯ ಪ್ರಶಸ್ತಿಯನ್ನು ಸಂಘದ ಮಾಜಿ ಅಧ್ಯಕ್ಷ ಕೆ.ಕೆ.ಶಶಿಧರ್ ಸ್ಮರಣಾರ್ಥ ಕ್ರೀಡಾ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ” ಉತ್ತಂಗ ಕಂಡಿದ್ದ ಸ್ಕೇಟಿಂಗ್ ಕ್ರೀಡೆ ರಿಂಕ್ ಹಾಕಿ ನೆನೆಗುದಿಯಲ್ಲಿ” ವರದಿಗೆ ಕಾಯಪಂಡ ಶಶಿ ಸೋಮಯ್ಯ, ಸಂಘದ ಸದಸ್ಯರಾಗಿದ್ದ ಎಸ್.ಎ.ಮುರುಳೀಧರ್ ತಮ್ಮ ತಾಯಿ ಪಾರ್ವತ್ತಮ್ಮ ಅಪ್ಪಸ್ವಾಮಿ ಹೆಸರಿನಲ್ಲಿ ಸ್ಥಾಪಿಸಿರುವ ಕೃಷಿ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ಬೇಸಿಗೆಯಲ್ಲಿ ಎರಡನೇ ಭತ್ತ ಬೆಳೆಯುತ್ತಿರುವ ರೈತ ವರದಿಗೆ ಹೆಚ್.ಕೆ.ಜಗದೀಶ್, ನಿವೃತ್ತ ವಾರ್ತಾಧಿಕಾರಿ ಪಳೆಯಂಡ ಪೊನ್ನಪ್ಪ ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ;ನಿಶಾನೆಮೊಟ್ಟೆಯಲ್ಲಿ ಮತ್ತೆ ಹರಳುಕಲ್ಲು ದಂಧೆ ;ವರದಿಗೆ ಕುಯ್ಯಮುಡಿ ಸುನಿಲ್, ಶಕ್ತಿ ಪತ್ರಿಕೆಯಲ್ಲಿ ಪ್ರಕಟವಾದ ”ಅಳಿವಿನಂಚಿನಲ್ಲಿರುವ ಎರವ ಜನಾಂಗಕ್ಕೆ ಪ್ರೋತ್ಸಾಹ” ವರದಿಗೆ ಪಳೆಯಂಡ ಪಾರ್ಥ ಚಿಣ್ಣಪ್ಪ, ಆಪ್ತ ಸಮಾಲೋಚಕಿ ತೇಲಪಂಡ ಆರತಿ ಸೋಮಯ್ಯ ತಮ್ಮ ಮಾವ ಕೋಟೆರ ಮುತ್ತಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಆರೋಗ್ಯ ವರದಿ ಪ್ರಶಸ್ತಿಯನ್ನು ಶಕ್ತಿ ಪತ್ರಿಕೆಯಲ್ಲಿ ‘‘ಪ್ರಕಟವಾದ ಜಿಲ್ಲೆಯಲ್ಲಿ ಮೊದಲ ಯಶಸ್ವಿ ಟಿಹೆಚ್ಎ ಶಸ್ತ್ರಚಿಕಿತ್ಸೆ ; ವರದಿಗೆ ಆನಂದ್ ಕೊಡಗು ಪಡೆದುಕೊಂಡರು.
ಸಂಘದ ಮಾಜಿ ಉಪಾಧ್ಯಕ್ಷ ಸಿ.ಎನ್.ಸುನಿಲ್ ಕುಮಾರ್ ಸ್ಮರಣಾರ್ಥ ಅತ್ಯುತ್ತಮ ವೀಡಿಯೋಗ್ರಫಿ ಪ್ರಶಸ್ತಿಯನ್ನು ದಿಗ್ವಿಜಯ ನ್ಯೂಸ್ ಚಾನಲ್ ನಲ್ಲಿ ಪ್ರಸಾರವಾಗಿರುವ ತುದಿಬಳ್ಳಿಯಿಂದ ಕಾಳು ಮೆಣಸು ಕೃಷಿ ಸುದ್ದಿಯ ವೀಡಿಯೋಗ್ರಫಿಗೆ ಕೆ.ಬಿ.ದಿವಾಕರ್, ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿದ್ದ ಮಂಡಿಬೆಲೆ ರಾಜಣ್ಣ ತಮ್ಮ ತಂದೆ ಮಂಡಿಬೆಲೆ ಶಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ಪ್ರಶಸ್ತಿಯನ್ನು ಪ್ರಜಾಸತ್ಯ ಪತ್ರಿಕೆಯಲ್ಲಿ ಪ್ರಕಟವಾದ ”ಕಾಡಾನೆಗಳ ಗ್ರಾಮ ವಾಸ್ತವ್ಯ-ಅನ್ನದಾತ ಹೈರಾಣ”ವರದಿಗೆ ಹಿರಿಕರ ರವಿ , ಮರಗೋಡು ಹಾಲು ಉತ್ಪಾದಕರ ಸಹಕಾರ ಸಂಘದ ಸ್ಥಾಪಕಾಧ್ಯಕ್ಷ ಮಂದ್ರೀರ ಮೋಹನ್ ದಾಸ್ ಅವರು ಪ್ರಗತಿಪರ ಹಾಲು ಉತ್ಪಾದಕರಾಗಿದ್ದ ಉಳುವಾರನ ಶೇಷಗಿರಿ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಹೈನುಗಾರಿಕೆ ವರದಿ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ”ನಾಪಂಡ ಬ್ರದರ್ಸ್ ಹಸು ಸಾಕಾಣಿಕೆ ಯಶೋಗಾಥೆ”ವರದಿಗೆ ಅಜ್ಜಮಾಡ ರಮೇಶ್ ಕುಟ್ಟಪ್ಪ, , ಸ್ವಸ್ಥ ಸಂಸ್ಥೆಯ ಮುಖ್ಯಸ್ಥೆ ಕಾಕಮಾಡ ಗಂಗಾ ಚಂಗಪ್ಪ ತಮ್ಮ ಮಾವ ಕಾಕಮಾಡ ನಾಣಯ್ಯ ಹೆಸರಿನಲ್ಲಿ ಸ್ಥಾಪಿಸಿರುವ ಶೈಕ್ಷಣಿಕ ವರದಿ ಪ್ರಶಸ್ತಿಯನ್ನು ಪ್ರಜಾಸತ್ಯ ಪತ್ರಿಕೆಯಲ್ಲಿ ಪ್ರಕಟವಾದ ಚಟುವಟಿಕೆ ಮೂಲಕವೇ ಎಲ್ಲಾ ವಿಷಯಗಳ ಕಲಿಕೆ”ವರದಿಗೆ ರವಿ ಎಸ್ ತಮ್ಮದಾಗಿಸಿಕೊಂಡರು.
ಬೆಳೆಗಾರ ಅಜ್ಜಮಾಡ ಕಟ್ಟಿ ಮಂದಯ್ಯ ತಮ್ಮ ತಂದೆ ತಾಯಿ ಅಜ್ಜಮಾಡ ಸುಬ್ಬಯ್ಯ ಬೊಳ್ಳಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ತೋಟಗಾರಿಕಾ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ”ಲಾಭ ತರುವ ರಾಂಬೂಟಾನ್”ವರದಿಗೆ ಆದರ್ಶ್ ಅದ್ಕಲೇಗಾರ್,
ಕೋವರ್ ಕೊಲ್ಲಿ ಇಂದ್ರೇಶ್ ತಮ್ಮ ತಂದೆ ಚಂದ್ರಶೇಖರ್ ಅವರ ಹೆಸರಿನಲ್ಲಿ ಸ್ಥಾಪಿಸಿದ ಮಾನವೀಯ ವರದಿ ಪ್ರಶಸ್ತಿಯನ್ನು ವಿಜಯವಾಣಿ ಪತ್ರಿಕೆಯಲ್ಲಿ ಪ್ರಕಟವಾದ ”ಸೂರಿಲ್ಲದೆ ಸೊರಗಿದೆ ಹಾವು ಗೊಲ್ಲರ ಬದುಕು”ವರದಿಗೆ ದಿನೇಶ್ ಮಾಲಂಬಿ,ಮಂಡಿಬೆಲೆ ರಾಜಣ್ಣ ತಮ್ಮ ತಾಯಿ ದ್ಯಾವಮ್ಮ ಶ್ಯಾಮಣ್ಣ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅರಣ್ಯ ವನ್ಯಜೀವಿ ದೃಶ್ಯಮಾಧ್ಯಮ ವರದಿ ಪ್ರಶಸ್ತಿಯನ್ನು ಪಬ್ಲಿಕ್ ಟಿವಿ ನಲ್ಲಿ ಪ್ರಸಾರವಾದ ”ವರ್ಷದ ಬಳಿಕ ತವರಿಗೆ ಮರಳಿದ ಕುಶ ಆನೆ”ವರದಿಗೆ ಮಲ್ಲಿಕಾರ್ಜುನ, ತೇನನ ರಾಜೇಶ್ ಅವರು ತಮ್ಮ ತಂದೆ ದಿವಂಗತ ತೇನನ ಸೋಮಣ್ಣ ಹೆಸರಿನಲ್ಲಿ ಸ್ಥಾಪಿಸಿರುವ ಸೇನೆಗೆ ಸಂಬಂಧಿಸಿದ ದೃಶ್ಯ ಮಾಧ್ಯಮ ವರದಿ ಪ್ರಶಸ್ತಿಯನ್ನು ದಿಗ್ವಿಜಯ ಚಾನಲ್ ನಲ್ಲಿ ಪ್ರಸಾರವಾದ ”ಸ್ವಾತಂತ್ರ್ಯ ಭಾರತದ ಮೊದಲ ಜನರಲ್ ಪೀಲ್ಡ್ ಮಾರ್ಷಲ್ ಕಾರ್ಯಪ್ಪ” ವರದಿಗೆ ಬಾಚರಣಿಯಂಡ ಅನುಕಾರ್ಯಪ್ಪ, ದಿವಂಗತ ಸಣ್ಣುವಂಡ ಎಂ ಚಂಗಪ್ಪ ಅವರ ಹೆಸರಿನಲ್ಲಿ ಕೊಡಗಿನ ಪತ್ರಕರ್ತರು ಸ್ಥಾಪಿಸಿರುವ ಸೇನೆಗೆ ಸಂಬಂಧಿಸಿದ ದೃಶ್ಯ ಮಾಧ್ಯಮ ವರದಿಗೆ ಚಿತ್ತಾರ ಚಾನಲ್ ನಲ್ಲಿ ಪ್ರಸಾರವಾದ ; ಮಾಜಿ ಯೋಧನ 103 ರ ಬದುಕು; ವರದಿಗೆ ವಿಶ್ವ ಕುಂಬೂರು, ವಕೀಲರಾದ ಪಿ.ಕೃಷ್ಣಮೂರ್ತಿ ಅವರು ತಮ್ಮ ತಂದೆ ದಿವಂಗತ ಟಿ.ಕೆ.ಸುಬ್ರಹ್ಮಣ್ಯ ಭಟ್ ಪಂಜಿತ್ತಡ್ಕ ಅವರ ಸ್ಮರಣಾರ್ಥ ಸ್ಥಾಪಿಸಿರುವ ದೃಶ್ಯ ಮಾಧ್ಯಮದಲ್ಲಿ ಪ್ರಸಾರವಾಗುವ ಮಾನವೀಯ ವರದಿ ಪ್ರಶಸ್ತಿಯನ್ನು ಚಾನಲ್ 24 ನಲ್ಲಿ ಪ್ರಸಾರವಾದ” ವರ್ಷಗಳ ಬಳಿಕ ಬೆಳಕು ಕಂಡ ಬಾಲೆ ”ವರದಿಗೆ ಕಿಶೋರ್ ರೈ ಕತ್ತಲೆ ಕಾಡು ಪ್ರಶಸ್ತಿ ಪಡೆದುಕೊಂಡರು.
ಇದರೊಂದಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ , ಆರ್ಥಿಕ ದುರ್ಬಲ ವರ್ಗದವರ ಬಗ್ಗೆ ಅತ್ಯುತ್ತಮ ವರದಿಗೆ ಪ್ರಶಸ್ತಿ ಪಡೆದ ಜಗದೀಶ್ ಜೋಡುಬೀಟಿ, ಅತ್ಯುತ್ತಮ ಸೇನಾ ವರದಿಗೆ ಪ್ರಶಸ್ತಿ ಪಡೆದ ಪುತ್ತರೀರ ಕರುಣ್ ಕಾಳಯ್ಯ, ಕಾಸರಗೋಡು ಜಿಲ್ಲಾ ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರಭಾಕರ ಕಲ್ಲೂರಾಯ ಬನದಗದ್ದೆ, ದತ್ತಿನಿಧಿ ಪ್ರಶಸ್ತಿ ಗೆ ಭಾಜನರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಜೀವಮಾನ ಸಾಧನೆಗಾಗಿ ರಾಜ್ಯ ಮಾದ್ಯಮ ಅಕಾಡೆಮಿಯಿಂದ ಪ್ರಶಸ್ತಿ ಪಡೆದ, ಪೂಮಾಲೆ ಪತ್ರಿಕೆಯ ಸಂಪಾದಕ ಅಜ್ಜಿನಿಕಂಡ ಮಹೇಶ್ ನಾಚಯ್ಯ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ,ಎಂ.ನಾಗೇಂದ್ರರಾವ್, ದತ್ತಿನಿಧಿ ಪ್ರಶಸ್ತಿ ಪಡೆದ ಬ್ರಹ್ಮಗಿರಿ ಪತ್ರಿಕೆಯ ಸಂಪಾದಕ ಉಳ್ಳಿಯಡ ಎಂ. ಪೂವಯ್ಯ ಅವರನ್ನು ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಸನ್ಮಾನಿಸಲಾಯಿತು.
ಮಹಾಸಭೆ : ಪ್ರಶಸ್ತಿ ಪ್ರದಾನಕ್ಕೆ ಮುನ್ನ ಸಂಘದ ವಾರ್ಷಿಕ ಮಹಾಸಭೆ ಜಿಲ್ಲಾಧ್ಯಕ್ಷೆ ಬಿ.ಆರ್. ಸವಿತಾ ರೈ ಅಧ್ಯಕ್ಷತೆಯಲ್ಲಿ ನಡೆಯಿತು.
ಖಜಾಂಜಿ ಆನಂದ್ ಕೊಡಗು ಲೆಕ್ಕಪತ್ರ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಬಾಚರಣಿಯಂಡ ಅನುಕಾರ್ಯಪ್ಪ ವಾರ್ಷಿಕ ವರದಿ ವಾಚಿಸಿದರು.