ನಾಪೋಕ್ಲು ಜು.23 : ಧಾರಾಕಾರ ಮಳೆಯಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ. ನಾಪೋಕ್ಲು -ಮೂರ್ನಾಡು ಮುಖ್ಯ ರಸ್ತೆಯ ಬೊಳಿಬಾಣೆ ಬಳಿ ರಸ್ತೆಯ ಮೇಲೆ ನೀರು ಹರಿಯುತ್ತಿದ್ದು, ಸಂಚಾರ ಕಡಿತಗೊಂಡಿದೆ. ಚೆರಿಯಪರಂಬು, ಕಲ್ಲು ಮೊಟ್ಟೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನದಿ ಪ್ರವಾಹದಿಂದ ಸಂಚಾರ ಸ್ಥಗಿತಗೊಂಡಿದ್ದು, ಸ್ಥಳೀಯ ನಿವಾಸಿಗಳು ಆತಂಕಗೊಂಡಿದ್ದಾರೆ.
ಅದರಂತೆ ನಾಪೋಕ್ಲುವಿನಿಂದ ಬೆಟ್ಟಗೇರಿ ಮಡಿಕೇರಿ ತೆರಳುವ ಕೊಟ್ಟಮುಡಿ ಬಳಿಯಲ್ಲಿ ಕಾವೇರಿ ನದಿ ತುಂಬಿ ಹರಿಯುತ್ತಿದೆ. ಕಕ್ಕಬ್ಬೆ ಗ್ರಾಮದಿಂದ ಕುಂಜಿಲ ಪೈನರಿ ದರ್ಗಾಕ್ಕೆ ಹೋಗುವ ರಸ್ತೆ ಜಲಾವೃತಗೊಂಡಿದೆ. ನಾಪೋಕ್ಲುವಿನಿಂದ ವಿರಾಜಪೇಟೆಗೆ ತೆರಳುವ ಕೈಕಾಡು ಹೊಳೆ ಹಾಗೂ ಎಡಪಾಲ ಮಾರ್ಗವಾಗಿ ಕಡಂಗ ತೆರಳುವ ಅರಪಟ್ಟು ಎಂಬಲ್ಲಿ ರಸ್ತೆಯಲ್ಲಿ ಪ್ರವಾಹ ಉಂಟಾಗಿದೆ.
ನಾಪೋಕ್ಲು ಸುತ್ತಮುತ್ತ ಮಳೆ ಆರ್ಭಟ ಮುಂದುವರಿದಿದ್ದು, ನದಿ, ತೊರೆ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿವೆ. ಮಳೆಯ ತೀವ್ರತೆ ಹೀಗೆ ಮುಂದುವರೆದರೆ ರಸ್ತೆ ಸಂಪರ್ಕ ಕಡಿತಗೊಳ್ಳುವ ಎಲ್ಲಾ ಸಾಧ್ಯತೆಗಳಿದೆ. (ವರದಿ : ಝಕರಿಯ, ನಾಪೋಕ್ಲು)









