ನಾಪೋಕ್ಲು ಜೂ.27 : ನಾಪೋಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೂರುಳಿ ಸುಭಾಷ್ ನಗರಕ್ಕೆ ತೆರಳುವ ರಸ್ತೆಯಲ್ಲಿರುವ ಅರಮನೆ ಪಾಲೆ ಅಪ್ಪು ಹಾಗೂ ಭೀಮಯ್ಯ ಎಂಬುವವರ ವಾಸದ ಮನೆಯ ಮೇಲೆ ಮನೆಯ ಪಕ್ಕದಲ್ಲಿದ್ದ ಭಾರಿ ಗಾತ್ರದ ಮರ ಬಿದ್ದು ಮನೆಯ ಮೇಲ್ಚಾವಣಿಗೆ ಅಳವಡಿಸಿದ್ದ ಶೀಟ್ ಗಳಿಗೆ ಹಾನಿಯಾಗಿ ಅಪಾರ ನಷ್ಟ ಸಂಭವಿಸಿದೆ.
ಗುರುವಾರ ಬೆಳಗ್ಗೆ ಭೀಮಯ್ಯ ಎಂಬುವವರು ಮಕ್ಕಳನ್ನು ಶಾಲೆಗೆ ಕಳುಹಿಸಲು ತಯಾರಿ ನಡೆಸುವ ಸಂದರ್ಭ ಮನೆಯ ಮೇಲೆ ಏಕಾಏಕಿ ಮರ ಬಿದ್ದಿದೆ.ಇದರಿಂದ ಗಾಬರಿಗೊಂಡ ಮನೆ ಮಂದಿ ಮನೆಯಿಂದ ಓಡಿ ಹೊರ ಹೋಗಿದ್ದಾರೆ.ಇದರಿಂದ ಯಾವುದೇ ಅನಾಹುತ ಸಂಭವಿಸದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್, ಗ್ರಾಮ ಲಕ್ಕಿಗೆ ಅಮೃತ, ಗ್ರಾ.ಪಂ ಅಧ್ಯಕ್ಷೆ ಎಚ್.ಎಸ್ ಪಾರ್ವತಿ, ಅಭಿವೃದ್ಧಿ ಅಧಿಕಾರಿ ಚೋಂದಕ್ಕಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಗ್ರಾ.ಪಂ ಸದಸ್ಯ ಪ್ರತೀಪ್ ಹಾಗೂ ಶಿವಾಚಾಳಿಯಂಡ ಜಗದೀಶ್ ಮನೆಯ ಮೇಲೆ ಬಿದ್ದ ಮರವನ್ನು ಯಂತ್ರೋಪಕರಣಗಳನ್ನು ಬಳಸಿ ತೆರವುಗೊಳಿಸಿದರು. ಬಳಿಕ ಮನೆಯೊಳಗೆ ಮಳೆ ನೀರು ಸೇರದಂತೆ ಟಾರ್ಪಲ್ ಹೊದಿಸಿ ತಾತ್ಕಾಲಿಕ ವ್ಯವಸ್ಥೆ ಕಲ್ಪಿಸಿದರು. ಬಡ ಕುಟುಂಬದವರಿಗೆ ಸರ್ಕಾರ ತಕ್ಷಣವೇ ನಷ್ಟ ಪರಿಹಾರ ಒದಗಿಸಬೇಕೆಂದು ಪಂಚಾಯತ್ ಸದಸ್ಯ ಪ್ರತೀಪ್ ಮನವಿ ಮಾಡಿದ್ದಾರೆ.
ಎಡಪಾಲದಲ್ಲಿ ಮನೆ ಗೋಡೆ ಕುಸಿದು ನಷ್ಟ : ನಾಪೋಕ್ಲು ಬಳಿಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಡಪಾಲ ಗ್ರಾಮದಲ್ಲಿ ಬಾರಿ ಗಾಳಿ ಮಳೆಗೆ ಗ್ರಾಮದ ನಿವಾಸಿ ಕೆ.ಎ. ಜುನೈದ್ ಎಂಬುವವರ ಮನೆಯ ಗೋಡೆ ಕುಸಿದು ಬಿದ್ದು ಅಪಾರ ನಷ್ಟ ಸಂಭವಿಸಿದೆ.
ಇದರಿಂದ ಮನೆಯ ಹಲವು ಗೋಡೆಗಳು ಬಿರುಕು ಬಿಟ್ಟಿದ್ದು ಮನೆ ಒಳಗೆ ಇದ್ದ ಗೃಹಉಪಯೋಗಿ ವಸ್ತುಗಳಿಗೆ ಹಾನಿಸಂಭವಿಸಿ ಅಪಾರ ನಷ್ಟ ಉಂಟಾಗಿದೆ.
ಸ್ಥಳಕ್ಕೆ ನಾಪೋಕ್ಲು ಕಂದಾಯ ಪರಿವೀಕ್ಷಕ ರವಿಕುಮಾರ್,ಉಪ ತಹಶೀಲ್ದಾರ್ ಸುನಿಲ್ ಕುಮಾರ್, ಗ್ರಾಮ ಲೆಕ್ಕಿಗ ಜನಾರ್ಧನ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಶಾ ಕುಮಾರಿ, ಸದಸ್ಯ ಮಹಮ್ಮದ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವರದಿ :ಝಕರಿಯ ನಾಪೋಕ್ಲು








