ನಾಪೋಕ್ಲು ಆ.12 : ದಡಾರದಂತಹ ಮಾರಕ ರೋಗಗಳಿಂದ ಮಕ್ಕಳನ್ನು ರಕ್ಷಿಸಲು ಪರಿಣಾಮಕಾರಿ ಮಿಷನ್ ಇಂದ್ರಧನುಷ್ 5.0 ಲಸಿಕಾಕರಣ ಅಭಿಯಾನ ಕಾರುಗುಂದ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಆಡಳಿತ ವೈದ್ಯಾಧಿಕಾರಿ ಪಾರ್ವತಿ ಚಾಲನೆ ನೀಡಿದರು.
ನಂತರ ಮಾತನಾಡಿದ ಅವರು, ದಡಾರ ಮತ್ತು ರುಬೆಲ್ಲಾವನ್ನು ನಿರ್ಮೂಲನೆ ಮಾಡಬೇಕಿದೆ. ಆ ನಿಟ್ಟಿನಲ್ಲಿ ಲಸಿಕಾಕರಣಕ್ಕೆ ಬಿಟ್ಟು ಹೋದ ಮಕ್ಕಳು ಮತ್ತು ಗರ್ಭಿಣಿಯರಿಗೆ ಇಂದ್ರಧನುಷ್ 5.0 ಲಸಿಕಾಕರಣವನ್ನು ಹಮ್ಮಿಕೊಳ್ಳಲಾಗಿದೆ ಎಂದ ಅವರು ಸಮುದಾಯದಿಂದ ರೋಗವನ್ನು ತಡೆಯಲು ಸಾಧ್ಯವಾಗಲಿದೆ. ಬಿಟ್ಟು ಹೋದ ಮತ್ತು ಹೊರಗುಳಿದ ಐದು ವರ್ಷದ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಲಸಿಕಾಕರಣ ಕೊಡಿಸಬೇಕು ಎಂದ ಲಸಿಕೆ ಅಭಿಯಾನದ ಮಾಹಿತಿಯನ್ನು ನೀಡಿದರು.
ಈ ಸಂದರ್ಭ ಕಾರುಗುಂದ ಗ್ರಾ.ಪಂ ಸದಸ್ಯೆ ಎಂ.ಕೆ.ಜಯಂತಿ, ಐಸಿಡಿಎಸ್ ಮಡಿಕೇರಿ ತಾಲೂಕು ಮೇಲ್ವಿಚಾರಕಿ ಶೀಲಾ, ಆಶಾ ಕಾರ್ಯಕರ್ತರು ಅಂಗನವಾಡಿ ಕಾರ್ಯಕರ್ತರು ಭಾಗವಹಿಸಿದ್ದರು.ನೆರೆದಿದ್ದವರಿಗೆ ಆರೋಗ್ಯದ ಬಗ್ಗೆ ಹಾಗೂ ಚುಚ್ಚುಮದ್ದಿನ ಮಹತ್ವದ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು.
ವರದಿ : ದುಗ್ಗಳ ಸದಾನಂದ