ಮಡಿಕೇರಿ,ಆ.12 : ಎರಡನೇ ಶನಿವಾರದ ರಜಾದಿನ., ಪ್ರವಾಸಿ ತಾಣವೂ ಆಗಿರುವ ಮಂಜಿನ ನಗರಿ ಮಡಿಕೇರಿಯಲ್ಲಿ ಜನ ಜಂಗುಳಿ ಇದ್ದಿದ್ದೇ.., ಬೆಳಿಗ್ಗೆಯೇ ದೇವಾಲಯಗಳಲ್ಲೂ ಭಕ್ತರು., ರಸ್ತೆಯಲ್ಲಿ ಶಾಲಾ ಮಕ್ಕಳ., ವಾಹನಗಳ ಓಡಾಟ., ನಗರ ಮಧ್ಯದೊಲಗಡೆ ತಲೆ ಎತ್ತಿ ನಿಂತಿರುವ ಐತಿಹಾಸಿಕ ಹಿನ್ನೆಲೆ ಇರುವ ಶ್ರೀ ಓಕಾರೇಶ್ವರ ದೇವಾಲಯದ ಪುಷ್ಕರಣಿಯ ಬಳಿ ಭಕ್ತರ ಓಡಾಟವಿತ್ತು., ಪ್ರಶಾಂತ ವಾತಾವರಣದಲ್ಲಿ ಒಂದು ಬದಿಯಿಂದ ‘ಹೊಯ್ಯಾ., ಹೊಯ್.,’ ಎಂಬ ರೈತರು ನಾಟಿ ನೆಡುವ ಹಾಡು ಕೇಳಿಬರುತ್ತಿತ್ತು., ಕಣ್ಹಾಯಿಸಿದಾಗ ಪುಟ್ಟದಾದ ಗದ್ದೆಯಲ್ಲಿ ಒಂದಷ್ಟು ಮಂದಿ ನಾಟಿ ನೆಡುತ್ತಿದ್ದರು., ರೈತರಲ್ಲದಂತಿದ್ದರೂ ಮಣ್ಣಿನ ಮಕ್ಕಳಾಗಿದ್ದರು..!
ಈ ದೃಷ್ಯ ಕಂಡುಬಂದಿದ್ದು ಇಂದು ಬೆಳಿಗ್ಗೆ ಓಂಕಾರೇಶ್ವರ ದೇವಾಲಯದ ಪುಷ್ಕರಣಿಯ ಪಕ್ಕದಲ್ಲಿ ಸಾಂಪ್ರದಾಯಿಕ ಹುತ್ತರಿ ಹಬ್ಬಕ್ಕೆ ಕದಿರು ತೆಗೆಯುವ ಸಲುವಾಗಿ ನಿರ್ಮಿಸಿರುವ ಗದ್ದೆಯಲ್ಲಿ., ವರ್ಷಂಪ್ರತಿಯಂತೆ ಈ ಬಾರಿ ಕೂಡ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ವತಿಯಿಂದ ಕೊಡಗು ಜಿಲ್ಲಾ ಜಾನಪದ ಪರಿಷತ್ನ ಸಹಯೋಗದೊಂದಿಗೆ ಸಾಂಪ್ರದಾಯಿಕ ನಾಟಿ ನೆಡುವ ಕಾರ್ಯ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಮಕ್ಕಳು, ಮಹಿಳೆ, ಪುರುಷ, ವೃದ್ಧರಾದಿಯಾಗಿ ಪಾಲ್ಗೊಂಡು ನಾಟಿ ನೆಟ್ಟರು. ಸಮಾಜ ಸೇವಕ ವಾಸು ಕುಟ್ಟಯ್ಯ ಅವರು ಸಿದ್ಧಪಡಿಸಿ ತಂದಿದ್ದ ಅಗೆಯನ್ನು ಎಲ್ಲರೂ ಸೇರಿ ನೆಟ್ಟರು.
ದೇವಾಲಯ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ರಮೇಶ್ ಹೊಳ್ಳ, ಸಮಿತಿ ಕಾರ್ಯನಿರ್ವಹಣಾಧಿಕಾರಿ ಪಿ.ಎಲ್.ದೇವರಾಜ್, ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ.ಅನಂತಶಯನ, ಹಿರಿಯ ಸದಸ್ಯರುಗಳಾದ ಅಂಬೆಕಲ್ ಕುಶಾಲಪ್ಪ, ಸುಶೀಲ ಕುಶಾಲಪ್ಪ, ಹಾ.ತಿ.ಜಯಪ್ರಕಾಶ್, ಮೊಣ್ಣಂಡ ಶೋಬಾ ಸುಬ್ಬಯ್ಯ, ಬೊಟ್ಟೋಳಂಡ ಕಾಶಿ ಕಾವೇರಪ್ಪ, ಪುದಿಯನೆರವನ ರೇವತಿ ರಮೇಶ್, ಚೊಕ್ಕಾಡಿ ಪ್ರೇಮಾ ರಾಘವಯ್ಯ, ಸಿದ್ದರಾಜು ಬೆಳ್ಳಯ್ಯ, ಪ್ರಸಾದ್ ಗೌಡ, ಪೂಜಾರೀರ ಕೃಪಾ ದೇವರಾಜ್, ವೀಣಾಕ್ಷಿ, ಕವಿತಾ ಕೃಪಾಲ್, ರೋಟರಿ ಮಿಸ್ಟಿ ಹಿಲ್ಸ್ ಮಾಜಿ ಅಧ್ಯಕ್ಷ ಅಂಬೆಕಲ್ ವಿನೋದ್, ಮಡಿಕೇರಿ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಕುಡೆಕಲ್ ಸಂತೋಷ್, ಡಾ. ಅನುಶ್ರೀ ಅನಂತಶಯನ, ಸುರಕ್ಷಾ ಸಂತೋಷ್, ದೇವಾಲಯ ಸಿಬ್ಬಂದಿಗಳಾದ ಕುಶ, ಅಪ್ಪಣ್ಣ, ಭೂಮಿಕಾ ಕುಶ ಸೇರಿದಂತೆ ಇತರರು ಪಾಲ್ಗೊಂಡಿದ್ದರು.








