ಮಡಿಕೇರಿ ಆ.13 : ಹಾರಂಗಿ ಅಣೆಕಟ್ಟೆಯಿಂದ ಮುಂದಿನ 15 ದಿನಗಳವರೆಗೆ ಪ್ರತಿ ದಿನ 1500 ಕ್ಯೂಸೆಕ್ ನೀರು ನದಿ ಮತ್ತು ಕಾಲುವೆ ಮೂಲಕ ಹರಿಸಲು ಹಾರಂಗಿ ನೀರಾವರಿ ಸಲಹಾ ಸಮಿತಿ ಸಭೆ ನಿರ್ಧರಿಸಿದೆ.
ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂಥರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಮೈಸೂರಿನ ನೀರಾವರಿ ನಿಗಮದ ಮುಖ್ಯ ಇಂಜಿನಿಯರ್ ಕಛೇರಿಯಲ್ಲಿ ಸಲಹಾ ಸಮಿತಿ ಸಭೆ ನಡೆಯಿತು.
ಉತ್ತಮ ಮಳೆಯಾಗದ ಕಾರಣ ನೀರಿನ ಅಭಾವ ಉಂಟಾಗಿರುವುದರಿಂದ ರೈತರು ಹಾಗೂ ಜನ, ಜಾನುವಾರುಗಳಿಗೆ ನೀರು ಹರಿಸುವ ಸಂಬಂಧ ಚರ್ಚಿಸಲಾಯಿತು.
15 ದಿನಗಳ ಅಂತರದಲ್ಲಿ ನೀರು ಸ್ಥಗಿತಗೊಳಿಸಿ, ಮುಂದಿನ 15 ದಿನಗಳ ಕಾಲ ಕಟ್ಟುಪದ್ಧತಿಯಲ್ಲಿ ನೀರು ಹರಿಬಿಡಲು ಇಂದಿನಿಂದಲೇ ಕ್ರಮ ಕೈಗೊಳ್ಳುವಂತೆ ನಿಗಮದ ಅಧಿಕಾರಿಗಳಿಗೆ ಸಚಿವರು ಹಾಗೂ ಶಾಸಕರು ಸೂಚನೆ ನೀಡಿದರು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಪಶುಸಂಗೋಪನೆ ಸಚಿವ ಕೆ.ವೆಂಕಟೇಶ್, ಶಾಸಕರಾದ ಎ.ಮಂಜು, ರವಿಶಂಕರ್, ವಿಧಾನ ಪರಿಷತ್ ಸದಸ್ಯ ಮರಿ ತಿಬ್ಬೇಗೌಡ, ಹಾರಂಗಿ ಜಲಾಶಯ ನೀರು ಬಳಕೆದಾರರ ಸಂಘದ ಅಧ್ಯಕ್ಷರು, ಕೊಡಗು ಮತ್ತು ಮೈಸೂರು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ನೀರಾವರಿ ಇಲಾಖೆಯ ಎಂಜಿನಿಯರ್ ಗಳು, ಕೃಷಿ ಇಲಾಖೆಯ ಜಂಟಿ ನಿರ್ದೇಶಕರು ಇದ್ದರು.









