ಸೋಮವಾರಪೇಟೆ ಆ.15 : ಸೋಮವಾರಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಬೋಸರಾಜು ಮತ್ತು ಮಡಿಕೇರಿ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕ ಡಾ. ಮಂತರ್ ಗೌಡ ಸಾರ್ವಜನಿಕರಿಂದ ಅಹವಾಲು ಸ್ವೀಕಾರ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಸಿದರು.
ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಭೋಸ್‍ರಾಜ್ ಮಾತನಾಡಿ, ಸುಮಾರು 20-25 ವರ್ಷಗಳ ನಂತರ ಕಾಂಗ್ರೇಸ್ ಜಿಲ್ಲೆಯನ್ನು ಹಿಡಿತಕ್ಕೆ ಪಡೆದುಕೊಂಡಿದೆ. ಪಕ್ಷದ ಕಾರ್ಯಕರ್ತರು ಮತ್ತು ನಾಯಕರ ಸತತ ಪರಿಶ್ರಮದಿಂದ ಈ ಸಾಧನೆ ಸಾಧ್ಯವಾಗಿದೆ. ರಾಜ್ಯದಲ್ಲಿ ಮತದಾರರು 136 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷದ ಶಾಸಕರನ್ನು ಆಯ್ಕೆ ಮಾಡಿದ್ದಾರೆ. ಚುನಾವಣೆಗೂ ಮುನ್ನ ಕಾಂಗ್ರೆಸ್ ಜನರಿಗೆ ಸುಮಾರು ರೂ. 60 ಸಾವಿರ ಕೋಟಿ ಯೋಜನೆಯ 5 ಆಶ್ವಾಸನೆಗಳನ್ನು ನೀಡಿತ್ತು. ಅದರಲ್ಲಿ ಈಗಾಗಲೇ ಮೂರನ್ನು ಈಡೇರಿಸಿದ್ದು, ತಿಂಗಳಾಂತ್ಯಕ್ಕೆ ಗೃಹಲಕ್ಷ್ಮೀ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.
ಮುಂದಿನ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ನಡೆಯಲಿದ್ದು, ಪಕ್ಷದ ನಾಯಕರು ಮತ್ತು ಕಾರ್ಯಕರ್ತರ ಈಗಿನಿಂದಲೇ ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿದೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಅಧಿಕಾರಿಗಳನ್ನು ಯಾವುದೇ ಕಾರಣಕ್ಕೂ ಕಾನೂನು ಕ್ರಮದಿಂದ ನುಣುಚಿಕೊಳ್ಳಲು ಬಿಡುವುದಿಲ್ಲ. ಅವರಿಗೆ ತಕ್ಕ ಶಿಕ್ಷೆ ಆಗುತ್ತದೆ. ಜಿಲ್ಲೆಯ ಎಲ್ಲ ತಾಲ್ಲೂಕು ಕೇಂದ್ರಗಳಲ್ಲೂ ಕಾರ್ಯಕರ್ತರು ಮತ್ತು ಪಕ್ಷದ ಮುಖಂಡರ ಸಭೆ ನಡೆಸಿ ಪಕ್ಷ ಕಟ್ಟುವ ಕೆಲಸ ಮಾಡಲಾಗುವುದು ಎಂದು ಹೇಳಿದರು.
ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಚುನಾವಣೆಯಲ್ಲಿ ಗೆಲುವು ದಾಖಲಿಸಿದ ನಂತರ ನಮ್ಮ ಜವಾಬ್ದಾರಿ ಇನ್ನೂ ಹೆಚ್ಚಾಗಿದೆ. ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ, ಆರೋಗ್ಯ ಸೇರಿದಂತೆ ಮೂಲಭೂತ ಸೌಲಭ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿ ಸಮಸ್ಯೆ ಪರಿಹರಿಸಲಾಗುವುದು. ಹೆಚ್ಚಿನ ಇಲಾಖೆಗಳಲ್ಲಿ ಸಿಬ್ಬಂದಿಗಳ ಕೊರತೆಯಿಂದ ಜನರಿಗೆ ಸರಿಯಾದ ಸಮಯಕ್ಕೆ ಕೆಲಸ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಸರ್ಕಾರದೊಂದಿಗೆ ಚರ್ಚಿಸಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಜಿಲ್ಲೆಯಲ್ಲಿ ಪಕ್ಷ ಸಂಘಟಿತವಾಗಬೇಕಾದರೆ, ಸಹಕಾರ ಕ್ಷೇತ್ರವನ್ನು ನಮ್ಮ ಹಿಡಿತಕ್ಕೆ ಪಡೆಯಬೇಕಿದೆ. ಇದರಿಂದ ಮುಂದಿನ ಸ್ಥಳೀಯ ಚುನಾವಣೆಗಳನ್ನು ಯಶಸ್ವಿಯಾಗಿ ಎದುರಿಸಲು ಸಾಧ್ಯ. ಕ್ಷೇತ್ರದಲ್ಲಿ ಹಲವು ಗುತ್ತಿಗೆ ನೌಕರರು ದುಭಾರಿ ವಾಹನಗಳನ್ನು ಸಂಚರಿಸುತ್ತಿದ್ದು, ಈಗಾಗಲೇ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ದೂರು ನೀಡಿಲಾಗಿದೆ. ಯಾವುದೇ ಸಮಸ್ಯೆಗಳಿದ್ದರೂ, ನನ್ನ ಮತ್ತು ಉಸ್ತುವಾರಿ ಸಚಿವರ ಗಮನಕ್ಕೆ ತಂದಲ್ಲಿ ಸ್ಥಳಕ್ಕೆ ಅಧಿಕಾರಿಗಳನ್ನು ಕರೆತಂದು ಸಮಸ್ಯೆ ಪರಿಹರಿಸಲಾಗುವುದು ಎಂದು ಭರವಸೆ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ. ಸತೀಶ್ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಸಮಿತಿಯ ಟಿ.ಪಿ. ರಮೇಶ್. ಕೆ.ಎಂ. ಲೋಕೇಶ್, ಬಿ.ಈ. ಜಯೇಂದ್ರ, ಎಸ್.ಎಂ. ಡಿಸಿಲ್ವ, ಶಾಂತಪ್ಪ, ಎಸ್.ಎಂ. ಚಂಗಪ್ಪ, ಮಿಥುನ್ ಹಾನಗಲ್ಲು, ಸಂಜಯ್ ಜೀವಿಜಯ ಮತ್ತಿತರರು ಇದ್ದರು.









