ಮಡಿಕೇರಿ ಆ.22 : ಮಡಿಕೇರಿ ನಗರದಲ್ಲಿರುವ ಕೊಡಗು ವೈದ್ಯಕೀಯ ಕಾಲೇಜ್ ನ ವಿದ್ಯಾರ್ಥಿನಿಯರ ಹಾಸ್ಟೆಲ್ ಬಳಿ ಅಸಭ್ಯವಾಗಿ ವರ್ತಿಸುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಆಟೋ ಚಾಲಕ, ನೆಲ್ಲಿಹುದಿಕೇರಿ ನಿವಾಸಿ ಸಿಜಿಲ್ (25) ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ ಆರೋಪದಡಿ ಮಡಿಕೇರಿಯ ಮೂವರು ಯುವಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ವೈದ್ಯಕೀಯ ಕಾಲೇಜ್ ನ ಹಾಸ್ಟೆಲ್ ನಲ್ಲಿ ಭದ್ರತೆ ಲೋಪದ ಬಗ್ಗೆ ಕಾಲೇಜು ವಿದ್ಯಾರ್ಥಿಗಳು ಸೋಮವಾರ ಪ್ರತಿಭಟನೆ ನಡೆಸಿ ಆಡಳಿತ ವ್ಯವಸ್ಥೆಯ ಗಮನ ಸೆಳೆದಿದ್ದರು. ಪುಂಡರು ಕಾಲೇಜು ಆವರಣಕ್ಕೆ ಬಂದು ಅಸಭ್ಯವಾಗಿ ವರ್ತಿಸುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಕಾಲೇಜ್ ಗೆ ಸೂಕ್ತ ಭದ್ರತೆಯ ಗೇಟ್, ಸಿಸಿ ಕ್ಯಾಮರಾ ಮತ್ತು ವಿದ್ಯುತ್ ವ್ಯವಸ್ಥೆ ಇಲ್ಲವೆಂದು ಟೀಕಿಸಿದ್ದರು.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ತ್ವರಿತ ಕ್ರಮಕ್ಕೆ ಪೊಲೀಸರಿಗೆ ಮಾರ್ಗದರ್ಶನ ನೀಡಿದ್ದರು. ಸಿಸಿ ಕ್ಯಾಮರಾ ದೃಶ್ಯಾವಳಿಯನ್ನು ಆಧರಿಸಿ ಪೊಲೀಸರ ತಂಡ ಕಾರ್ಯಾಚರಣೆ ನಡೆಸಿತು.
::: ಮಾಹಿತಿ ನೀಡಿ :::
ಶಾಲಾ, ಕಾಲೇಜುಗಳಲ್ಲಿ ಕಿಡಿಗೇಡಿಗಳು ತೊಂದರೆ ನೀಡುವುದು ಕಂಡು ಬಂದಲ್ಲಿ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಎಸ್‍ಪಿ ಮನವಿ ಮಾಡಿದರು. ಮಾಹಿತಿ ನೀಡುವವರ ಹೆಸರನ್ನು ಬಹಿರಂಗ ಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.