ಮಡಿಕೇರಿ ಆ.22 : ಗಾಂಜಾ ಸಾಗಾಟ, ಮಹಿಳೆಯರೊಂದಿಗೆ ಅಸಭ್ಯ ವರ್ತನೆ ಮತ್ತಿತರ ಅಕ್ರಮ ಚಟುವಟಿಕೆಗಳಲ್ಲಿ ತೊಡಗುವ ಆಟೋ ಚಾಲಕರ ‘ಚಾಲನಾ ಪರವಾನಗಿ’ಯನ್ನು ನಿರ್ದಿಷ್ಟ ಅವಧಿಗೆ ರದ್ದುಗೊಳಿಸುವಂತೆ ಆಟೋ ಚಾಲಕರ ಸಂಘದ ಪದಾಧಿಕಾರಿಗಳೇ ಪೊಲೀಸರನ್ನು ಆಗ್ರಹಿಸಿದ್ದಾರೆ.
ನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಸಂಚಾರಿ ಠಾಣಾಧಿಕಾರಿ ಶ್ರೀಧರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಪೊಲೀಸ್ ಮತ್ತು ಚಾಲಕರ ಸಭೆಯಲ್ಲಿ ಜಿಲ್ಲಾ ಆಟೋ ಚಾಲಕರ ಮತ್ತು ಮಾಲೀಕರ ಸಂಘ ನಿಯಮ ಉಲ್ಲಂಘಿಸುತ್ತಿರುವ ಚಾಲಕರ ಬಗ್ಗೆ ಗಮನ ಸೆಳೆದರು.
ಸಂಘದ ಅಧ್ಯಕ್ಷ ಡಿ.ಹೆಚ್.ಮೇದಪ್ಪ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸುವ ಆಟೋ ಚಾಲಕರಿದ್ದಾರೆ. ಇವರುಗಳ ಚಾಲನಾ ಪರವಾನಗಿಯನ್ನು ಕನಿಷ್ಟ ಒಂದು ವರ್ಷದವರೆಗೆ ಸ್ಥಗಿತಗೊಳಿಸುವ ಕಠಿಣ ಕ್ರಮ ಕೈಗೊಳ್ಳಿ. ಇಂತಹ ವಿಚಾರದಲ್ಲಿ ಸಂಘ ಎಂದಿಗೂ ಚಾಲಕರ ಪರ ನಿಲ್ಲುವುದಿಲ್ಲವೆಂದು ಸ್ಪಷ್ಟಪಡಿಸಿದರು.
::: ನಿಲುಗಡೆ ಸಮಸ್ಯೆ :::
ಮಡಿಕೇರಿ ನಗರದಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಯಿಂದ ವಾಹನ ನಿಲುಗಡೆ ಕಷ್ಟವಾಗಿದೆ. ಆಟೋ ಚಾಲಕರು ತಮ್ಮ ಆರೋಗ್ಯ ಸಮಸ್ಯೆಗಳಿಗೆ ಆಸ್ಪತ್ರೆಗೆ ತೆರಳಿದಾಗ ಆಸ್ಪತ್ರೆಯ ಬಳಿ ಸಾರ್ವಜನಿಕ ವಾಹನ ನಿಲುಗಡೆ ಸ್ಥಳದಲ್ಲಿ ಆಟೋ ರಿಕ್ಷಾ ನಿಲುಗಡೆಗೆ ಅವಕಾಶವಿಲ್ಲ. ಇದರಿಂದ ಚಾಲಕರಿಗೆ ತೊಂದರೆಯಾಗುತ್ತಿದ್ದು, ನಿಲುಗಡೆಗೆ ಅವಕಾಶ ನೀಡಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಎಸ್‍ಐ ಶ್ರೀಧರ್, ಆಟೋ ರಿಕ್ಷಾಗಳಿಗೆ ಸಾರ್ವಜನಿಕ ನಿಲುಗಡೆ ಪ್ರದೇಶಗಳಲ್ಲಿ ಯಾವುದೇ ಕಾರಣಕ್ಕೂ ನಿಲುಗಡೆಗೆ ಅವಕಾಶವಿಲ್ಲ. ಹೀಗಿದ್ದೂ ವೈಯಕ್ತಿಕ ಕಾರಣಗಳ ಹಿನ್ನೆಲೆ ಆಸ್ಪತ್ರೆಗೆ ತೆರಳುವ ಹಂತದಲ್ಲಿ ಒಂದು ಆಟೋ ನಿಲುಗಡೆಗೆ ಅವಕಾಶ ಮಾಡಿಕೊಡಲಾಗುತ್ತದೆ. ಅದಕ್ಕೆ ಅಗತ್ಯವಾದ ಬೋರ್ಡ್ ಅಳವಡಿಸುವಂತೆ ಆಟೋ ಚಾಲಕರ ಸಂಘಕ್ಕೆ ಸೂಚಿಸಿ, ಯಾವುದೇ ಕಾರಣಕ್ಕೂ ಅಲ್ಲಿ ಹೆಚ್ಚಿನ ಆಟೋಗಳನ್ನು ನಿಲ್ಲಿಸುವುದಕ್ಕೆ ಅವಕಾಶವಿಲ್ಲವೆಂದು ಹೇಳಿದರು.
ನಗರಸಭೆಯ ಮಾಜಿ ಸದಸ್ಯ ಉಣ್ಣಿ ಕೃಷ್ಣನ್ ಮಾತನಾಡಿ ಜಿಲ್ಲಾ ಆಸ್ಪತ್ರೆ ಮುಂಭಾಗದ ಮುಖ್ಯ ರಸ್ತೆಯ ಬದಿಗಳಲ್ಲಿ ಭಾರೀ ವಾಹನಗಳನ್ನು ದಿನಗಟ್ಟಲೆ ನಿಲುಗಡೆ ಮಾಡಲಾಗುತ್ತಿದೆ. ಇದಕ್ಕೆ ಅವಕಾಶ ನೀಡದಿದ್ದಲ್ಲಿ ಆ ವಿಭಾಗದ ವಾಹನ ನಿಲುಗಡೆ ಸಮಸ್ಯೆ ಪರಿಹಾರವಾಗಬಹುದು ಎಂದರು.
ನಗರ ವ್ಯಾಪ್ತಿಯ ಟ್ಯಾಕ್ಸಿ, ಪಿಕಪ್, ಆಟೋ ರಿಕ್ಷಾ, ಲಾರಿ ಸೇರಿದಂತೆ ವಿವಿಧ ವಾಹನಗಳ ನಿಲುಗಡೆಗೆ ಜಾಗವನ್ನು ಗೊತ್ತುಪಡಿಸಲಾಗಿದೆ. ಅಂತಹ ಸ್ಥಳದಲ್ಲಿ ಇತರೆ ವಾಹನಗಳ ನಿಲುಗಡೆಯಾಗುತ್ತಿದೆ. ಯಾವುದೇ ಕಾರಣಕ್ಕು ಸೂಚಿಸಿದ ವಾಹನಗಳು ಮಾತ್ರ ಅಲ್ಲಿ ನಿಲುಗಡೆಯಾಗಬೇಕು. ನಿಯಮ ಮೀರಿದಲ್ಲಿ ಕ್ರಮ ಅನಿವಾರ್ಯವೆಂದು ಠಾಣಾಧಿಕಾರಿ ತಿಳಿಸಿದರು.
ಈ ಸಂದರ್ಭ ಪಿಕ್ ಅಪ್, ಟ್ಯಾಕ್ಸಿ ಚಾಲಕರ ಸಂಘದ ಪ್ರತಿನಿಧಿಗಳು ಮಾತನಾಡಿ, ತಮಗೆ ನಿಗಧಿಪಡಿಸಿದ ಸ್ಥಳಗಳಲ್ಲಿ ವೈಟ್ ಬೋರ್ಡ್ ವಾಹನಗಳನ್ನು ಕೆಲವರು ನಿಲ್ಲಿಸುತ್ತಾರೆ. ಇದನ್ನು ಪ್ರಶ್ನಿಸಿದಲ್ಲಿ ಅನಗತ್ಯ ಸಂಘರ್ಷಗಳು ಉಂಟಾಗುತ್ತದೆ ಎಂದು ಸಮಸ್ಯೆ ಮುಂದಿಟ್ಟರು. ನಗರದ ಇಂದಿರಾಗಾಂಧಿ ವೃತ್ತದಿಂದ ರಾಮಮಂದಿರದವರೆಗೆ ಇರುವ ನಿಲುಗಡೆ ಸ್ಥಳದಲ್ಲಿ ಅಲ್ಲಿನ ಅಂಗಡಿ ಮಾಲೀಕರೆ ತಮ್ಮ ವಾಹನಗಳನ್ನು ಬೆಳಗ್ಗಿನಿಂದ ಸಂಜೆಯವರೆಗೆ ನಿಲ್ಲಿಸುವುದರಿಂದ ಉಂಟಾಗುತ್ತಿರುವ ಸಮಸ್ಯೆಗಳ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು.
ಖಾಸಗಿ ಬಸ್ ನಿಲ್ದಾಣದಿಂದ ಪತ್ರಿಕಾಭವನಕ್ಕಾಗಿ ತೆರಳುವ ಹಾದಿಯಲ್ಲಿ ವಾಹನ ನಿಲುಗಡೆಯಿಂದ ಬಸ್ ಸಂಚಾರ ಕಷ್ಟಕರವಾಗಿದೆ ಎಂದು ಬಸ್ ನಿರ್ವಾಹಕರೊಬ್ಬರು ಗಮನ ಸೆಳೆದರು.
ಎಲ್ಲಾ ಸಮಸ್ಯೆಗಳನ್ನು ಆಲಿಸಿದ ಎಸ್‍ಐ ಶ್ರೀಧರ್, ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಸಭೆಯಲ್ಲಿ ಎಎಸ್‍ಐ ನಂದ ಉಪಸ್ಥಿತರಿದ್ದರು.
Breaking News
- *ಕನ್ನಡ ರಾಜ್ಯೋತ್ಸವ : ನ.23 ರಂದು ಮಡಿಕೇರಿಯಲ್ಲಿ ರಸಪ್ರಶ್ನೆ ಮತ್ತು ಗೀತಗಾಯನ ಕಾರ್ಯಕ್ರಮ*
- *ಗಂಗಮ್ಮ ನಿಧನ : ಶಾಸಕ ಪೊನ್ನಣ್ಣ ಸಂತಾಪ*
- *ಕೊಡಗು : ಡಿ.1 ರಿಂದ ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ ಪ್ರಕ್ರಿಯೆ ಆರಂಭ : ಜಿಲ್ಲಾಧಿಕಾರಿ ವೆಂಕಟ್ ರಾಜಾ*
- *ಪಡಿತರ ಚೀಟಿ ಪರಿಷ್ಕರಣೆ : ಅರ್ಹ ಬಿಪಿಎಲ್ ಕಾರ್ಡ್ ರದ್ದುಗೊಳಿಸುವುದಿಲ್ಲ : ಸಚಿವ ಮುನಿಯಪ್ಪ*
- *ಕೊಡಗು ಬ್ಲಡ್ ಡೋನಸ್೯ ಸಂಸ್ಥೆಯ 7ನೇ ವಾಷಿ೯ಕೋತ್ಸವ : ಜೀವ ಉಳಿಸುವ ರಕ್ತದಾನಿಗಳೇ ನಿಜವಾದ ಹೀರೋಗಳು : ಅನಿಲ್ ಹೆಚ್.ಟಿ.*
- *ದಿವ್ಯಜ್ಯೋತಿ ಪತ್ತಿನ ಸಹಕಾರ ಸಂಘದ ಚುನಾವಣೆ : ಜಾನ್ಸನ್ ಪಿಂಟೋ ಸೇರಿ ಹಲವರು ಕಣದಲ್ಲಿ*
- *ಕಲ್ಲು ಬಾಯ್ಸ್ ಲೈಕ್ಸ್ ಫ್ಯಾಶನ್ ಫುಟ್ಬಾಲ್ ಕಪ್ : ನಿಯೋನ್ ಎಫ್.ಸಿ ಅಮ್ಮತ್ತಿ ಚಾಂಪಿಯನ್*
- *ಗ್ರಾ.ಪಂ ಉಪಚುನಾವಣೆ : ಕೊಡಗಿನ ವಿವಿಧೆಡೆ ಮದ್ಯ ಮಾರಾಟ ನಿಷೇಧ*
- *ನಂದಿನಿ ವಿವಿಧ ಶ್ರೇಣಿಯ ಹಾಲು ಬಿಡುಗಡೆ : ದೇಶದ ಹಾಲು ಉತ್ಪಾದನೆಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ*
- *ಕಟ್ಟೆಹಾಡಿ ಅರಣ್ಯ ಹಕ್ಕು ಸಮಿತಿ ರಚನೆ : ಆದಿವಾಸಿಗಳನ್ನು ಒಕ್ಕಲೆಬ್ಬಿಸದಂತೆ ಆಗ್ರಹ*