ಸುಂಟಿಕೊಪ್ಪ,ಆ.28 : ಮಕ್ಕಳಿಗೆ ವಿದ್ಯೆ, ಸಂಸ್ಕಾರ ಕಲಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ರೂಪುಗೊಳ್ಳುವ ಪ್ರತಿಯೊಬ್ಬರು ಶಿಕ್ಷಕರನ್ನು ನೆನಪಿಸುತ್ತಾರೆ ಎಂದು ಸಂತ ಅಂತೋಣಿ ಪ್ರಾಥಮಿಕ ಶಾಲೆಯ ನಿವೃತ್ತ ಶಿಕ್ಷಕಿ ವಸಂತಿ ಹೇಳಿದರು.
ಸಂತ ಅಂತೋಣಿ ಪ್ರಾಥಮಿಕ ಶಾಲೆಯ 1980 ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಶಾಲೆಯಲ್ಲಿ ಬಾಲಂಗೋಚಿ ‘ಹಬ್ಬ’ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಹಿರಿಯ ಶಿಕ್ಷಕಿ ವಸಂತಿ, ನನ್ನ ಜೀವನದ ಅತ್ಯಂತ ಸಂತೋಷದ ಅವಿಸ್ಮರಣೀಯ ಕ್ಷಣವಾಗಿದೆ. ನಿವೃತ್ತರಾಗಿ 20 ವರ್ಷ ಕಳೆದ ನಂತರ ದೂರದ ತುಮಕೂರಿನಿಂದ ತನ್ನನು ಕರೆಯಿಸಿ ಸನ್ಮಾನಿಸಿದ ಹಳೆಯ ಎಲ್ಲಾ ವಿದ್ಯಾರ್ಥಿಗಳಿಗೆ ತುಂಬು ಹೃದಯದ ಧನ್ಯವಾದಗಳು. ಶಿಕ್ಷಕರು ವಿದ್ಯಾರ್ಥಿಗಳಿಗೆ ಪಾಠ ಮಾಡುವುದು ಕರ್ತವ್ಯವಾದರೂ ಅವರನ್ನು ತಿದ್ದಿ ತೀಡಿ ಬೆಳೆಸುವುದು ಸಾಮಾನ್ಯದ ಕೆಲಸವಲ್ಲ ಎಂದು ಹೇಳಿದರು.
ಸಂತ ಅಂತೋಣಿ ಪ್ರಾಥಮಿಕ ಶಾಳೆಯ ಮುಖ್ಯೋಪಾದ್ಯಾಯನಿ ವೀರಾ ಡಿಸೋಜ ಮಾತನಾಡಿ ಹಳೆ ವಿದ್ಯಾರ್ಥಿಗಳು ಈ ಶಾಲೆಯ ಮೇಲಿನ ಅಭಿಮಾನದಿಂದ ಹಾಗೂ ಸಿಸ್ಟರ್ಸ್‍ಗಳ, ಶಿಕ್ಷಕರ ಮೇಲಿನ ಪ್ರೀತಿಯಿಂದ ಕಾರ್ಯಕ್ರಮ ಏರ್ಪಡಿಸಿರುವುದು ಸಂತಸ ತಂದಿದೆ. ಜ್ಞಾನ ವಿದ್ಯೆ ಕೊಟ್ಟ ಶಿಕ್ಷಕರಿಗೆ ಹಳೇ ವಿದ್ಯಾರ್ಥಿಗಳು ಗೌರವ ನೀಡಿ ಸನ್ಮಾನಿಸಿರುವುದು ಶ್ಲಾಘನೀಯ ಎಂದರು.
ಶಾಲೆಯ ಹಳೆಯ ವಿದ್ಯಾರ್ಥಿ ಜಿ.ಪಂ. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಬಿ.ಬಿ.ಭಾರತೀಶ್ ಮಾತನಾಡಿ, ನಮಗೆ ವಿದ್ಯೆ ಕಲಿಸಿದ ಶಿಕ್ಷಕರಿಗೆ, ಶಾಲೆಗೆ ನಾವು ಚಿರಋಣಿಯಾಗಿದ್ದು, ಹಳೇ ವಿದ್ಯಾರ್ಥಿಗಳು ಸೇರಿ ಉತ್ತಮ ಕಾರ್ಯಕ್ರಮ ನಡೆಸಿದ್ದಾರೆ. ಶಾಲೆ ಕಟ್ಟಿ ಬೆಳೆಸುವುದು ಅಷ್ಟು ಸುಲಭದ ಕೆಲಸವಲ್ಲ ನನ್ನ ಅಧಿಕಾರಾವಧಿಯಲ್ಲಿ ಈ ಶಾಲೆಗೆ ನನ್ನಿಂದ ಆಗುವ ಸಹಾಯ ನೀಡಿದ್ದೇನೆ. ಈ ಶಾಲೆಯಲ್ಲಿ ನಮಗೆ ವಿದ್ಯೆ ಸಂಸ್ಕಾರ ನೀಡಿದ ಶಿಕ್ಷಕರು ನಮ್ಮ ಜೀವನದಲ್ಲಿ ಅಪಾರ ಪ್ರಭಾವ ಬೀರಿದರು ಎಂದು ನೆನಪಿಸಿಕೊಂಡರು.
ನಿವೃತ್ತ ಹಿರಿಯ ಶಿಕ್ಷಕರಾದ ವಸಂತಿ, ಸಿಸ್ಟರ್ ವೈಲೆಟ್ ಮೇನೆಜೆಸ್ ಹಾಗೂ ಶಾಲಾ ಮುಖ್ಯೋಪಾದ್ಯಾಯನಿ ವೀರಾ ಡಿಸೋಜ ಅವರನ್ನು ಸನ್ಮಾನಿಸಿ ಗೌರವಿಸಿದರು.
ಫೆಲ್ಸಿ, ಜರಿನ, ಮಾಗ್ದಲಿನ್ ತಂಡದವರು ಪ್ರಾರ್ಥಿಸಿದರು. ಶೋಭಾವತಿ ಸ್ವಾಗತಿಸಿದರು. ಸಮಾದ್ ನಿರೂಪಿಸಿ, ಗ್ಯಾಬ್ರಿಯಲ್ ಡಿಸೋಜ ವಂದಿಸಿದರು.