ಮಡಿಕೇರಿ ಸೆ.9 : ಮಕ್ಕಳ ಪೋಷಣೆಯಲ್ಲಿ ತಾಯಂದಿರ ಜವಾಬ್ದಾರಿ ಹೆಚ್ಚಾಗಿದ್ದು, ಭವ್ಯ ಭಾರತದ ಭವಿಷ್ಯ ಹಾಗೂ ಉತ್ತಮ ಸಮಾಜದ ನಿರ್ಮಾಣ ಜವಾಬ್ದಾರಿ ಪೋಷಕರ ಕೈಯಲ್ಲಿದೆ. ಮಕ್ಕಳಿಗೆ ಆಸ್ತಿ ಮಾಡುವ ಬದಲು ಮಕ್ಕಳನ್ನೇ ಈ ದೇಶದ ಆಸ್ತಿಯನ್ನಾಗಿ ಮಾಡುವಂತಾಗಬೇಕು ಎಂದು ಕೊಡಗು ಪತ್ರಕರ್ತ ಸಂಘದ ಸಂಘಟನಾ ಕಾರ್ಯದರ್ಶಿ ಹಾಗೂ ಅಖಿಲ ಕೊಡವ ಸಮಾಜ ಯೂತ್ ವಿಂಗ್ ಅಧ್ಯಕ್ಷ ಚಮ್ಮಟೀರ ಪ್ರವೀಣ್ ಉತ್ತಪ್ಪ ಕರೆ ನೀಡಿದರು.
ಮಡಿಕೇರಿಯ ಹೊಸ ಬಡಾವಣೆ ಅಂಗನವಾಡಿ ಕೇಂದ್ರದಲ್ಲಿ ನಡೆದ ಪೋಷಣ ಮಾಸಾಚರಣೆಯ ಪೌಷ್ಟಿಕ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಣ್ಣ ವಯಸ್ಸಿನಿಂದಲೇ ಮಕ್ಕಳಿಗೆ ಉತ್ತಮ ನಡೆ ನುಡಿ ಸಂಸ್ಕಾರವನ್ನು ಕಲಿಸಬೇಕಿದೆ. ಇದರಲ್ಲಿ ಪೋಷಕರ ಜವಾಬ್ದಾರಿ ಅಧಿಕ, ಅದರಲ್ಲೂ ತಾಯಂದಿರು ತಮ್ಮ ಮಕ್ಕಳ ಚಲನವಲನಗಳ ಬಗ್ಗೆ ನಿಗಾ ಇಡಬೇಕೆಂದು ಕರೆ ನೀಡಿದರು.
ಸಣ್ಣ ವಯಸ್ಸಿನಿಂದಲೇ ಮಕ್ಕಳು ದುಶ್ಚಟಗಳಿಗೆ ಬಲಿಯಾಗದಂತೆ ನೋಡಿಕೊಳ್ಳಬೇಕು, ಪೋಷಕರು ತಾವು ಕಲಿತಿರುವ ದುಶ್ಚಟಗಳನ್ನು ಮಕ್ಕಳ ಮುಂದೆ ಪ್ರದರ್ಶನ ಮಾಡಬೇಡಿ ಇದನ್ನು ಅವರು ಹಿಂಬಾಲಿಸುತ್ತಾರೆ ಎಂದರು.
ಅಂಗನವಾಡಿ ಕೇಂದ್ರಗಳಲ್ಲಿ ಉತ್ತಮ ಪೌಷ್ಟಿಕ ಆಹಾರ ದೊರೆಯುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವುದರ ಜೊತೆಗೆ ತಾವುಗಳು ಸಾಧ್ಯವಾದಷ್ಟು ಔಷಧಿ ರಹಿತ ಆಹಾರವನ್ನು ಸೇವಿಸಬೇಕಿದೆ. ಹಿಂದಿನ ಕಾಲದವರ ಆಹಾರ ಕ್ರಮದಿಂದ ಅವರು ಸುದೀರ್ಘ ಅವಧಿ ಆರೋಗ್ಯವಂತರಾಗಿ ಬದುಕುತ್ತಿದ್ದರೂ, ಆದರೆ ಇಂದಿನ ಆಹಾರದಿಂದ ಆರೋಗ್ಯದಲ್ಲಿ ಏರುಪೇರಾಗುತ್ತಿದೆ ಎಂದು ಹೇಳಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಡಿಕೇರಿ ತಾಲೂಕಿನ ಮೇಲ್ವಿಚಾರಕಿ ಸಿ.ಪಿ ಸವಿತಾ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ವಿವಿಧ ರೋಗರುಜಿನಗಳು ಬರುತ್ತಿದ್ದು, ನಮ್ಮ ಆಹಾರ ಕ್ರಮದಲ್ಲಿ ಒಂದಷ್ಟು ಬದಲಾವಣೆಯನ್ನು ಮಾಡಿಕೊಳ್ಳದೆ ಇದ್ದರೆ ನಾವು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತೇವೆ ಎಂದ ಅವರು ಮಕ್ಕಳಿಗೆ ಉತ್ತಮ ಪೌಷ್ಟಿಕಾಂಶದ ಆಹಾರಗಳನ್ನು ನೀಡುವುದರ ಜೊತೆಗೆ ಕೈತೋಟದಲ್ಲಿ ಬೆಳೆದ ತರಕಾರಿಗಳನ್ನು, ಮೊಳಕೆ ಕಾಳುಗಳನ್ನು ಮಕ್ಕಳಿಗೆ ಮಕ್ಕಳಿಗೆ ಆಹಾರವಾಗಿ ನೀಡಬೇಕಿದೆ ಎಂದರು.
ಮಕ್ಕಳಿಗೆ ಆದಷ್ಟು ಹೊರಗಿನ ತಿಂಡಿ ತಿನಿಸುಗಳನ್ನು ಕಡಿಮೆ ಮಾಡಿ ಮನೆಯಲ್ಲಿಯೇ ಉತ್ತಮ ಪೋಷಕಾಂಶದ ಶುಚಿರುಚಿಯಾದ ಆಹಾರಗಳನ್ನು ತಾಯಂದಿರೇ ಮಾಡಿಕೊಡುವುದರಿಂದ ಆರೋಗ್ಯವಂತ ಮಗುವಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದರು.
ಅಂಗನವಾಡಿ ಕೇಂದ್ರಗಳಲ್ಲಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ ಸಿಗುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದ ಅವರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕರೆನೀಡಿದರು.
ಆರೋಗ್ಯ ಇಲಾಖೆಯ ಆರೋಗ್ಯ ನಿರೀಕ್ಷಕ ಶ್ರೀನಾಥ್ ಮಾತನಾಡಿ, ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡುತ್ತಾ ಪೋಷಕರು ತಮ್ಮ ಹಾಗೂ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ನೀಡಬೇಕಿದೆ ಎಂದು ಕರೆನೀಡಿದರು.
ಕಾಲ ಕಾಲಕ್ಕೆ ಸರಿಯಾಗಿ ಪೌಷ್ಟಿಕ ಆಹಾರವನ್ನು ತೆಗೆದುಕೊಳ್ಳುವುದರ ಜೊತೆಗೆ ತಮ್ಮ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಬೇಕಿದೆ ಎಂದರು.
ನಿವೃತ್ತ ಎಲ್.ಹೆಚ್.ಓ ಲೀಲಾವತಿ ಸೋಮಯ್ಯ ಮಾತನಾಡಿ, ಸರ್ಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳಲು ತಿಳಿಸಿ ಗರ್ಭಿಣಿಯರು ಕಾಲಕಾಲಕ್ಕೆ ಸರಿಯಾಗಿ ಇಲಾಖೆ ತಿಳಿಸಿರುವಂತಹ ಔಷಧಿ ಹಾಗೂ ಚುಚ್ಚುಮದ್ದು ಪಡೆಯುವುದರ ಜೊತೆಗೆ ಉತ್ತಮ ಆಹಾರ ಸೇವನೆಯಿಂದ ಆರೋಗ್ಯವಂತ ಮಗುವಿನ ಜನನವಾಗುತ್ತದೆ ಎಂದರು.
ಖಾಸಗಿ ಆಸ್ಪತ್ರೆಗಳಲ್ಲಿ ದುಬಾರಿ ಹಣ ಹಾಗೂ ಸಾಲುಗಟ್ಟಿ ನಿಲ್ಲುವ ಬದಲು ಸ್ಥಳೀಯ ಆರೋಗ್ಯ ಕ್ರೇಂದ್ರಗಳಲ್ಲಿ ಸಿಗುವ ಸವಲತ್ತುಗಳನ್ನು ಮೊದಲು ಪಡೆದುಕೊಳ್ಳಿ ಎಂದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಕೆ.ಎಸ್.ಕೌಶಿಕ್ ಮುತ್ತಮ್ಮ, ಆಶಾ ಕಾರ್ಯಕರ್ತೆ ಜೂರಾ ಸೇರಿದಂತೆ ಪೋಷಕರು ಹಾಗೂ ಮಕ್ಕಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಪೋಷಕರು ಮನೆಯಲ್ಲಿಯೇ ತಯಾರಿಸಿ ತರಲಾಗಿದ್ದ ಖಾದ್ಯಗಳನ್ನು ಮಕ್ಕಳಿಗೆ ತಿಳಿಸುವುದರ ಜೊತೆಗೆ ಪರಸ್ಪರ ಹಂಚಿಕೊಂಡರು.