ಮಡಿಕೇರಿ ಸೆ.12 : ಸಮತೋಲನ ಮತ್ತು ಶುದ್ಧ ಆಹಾರ ಪದ್ಧತಿಯನ್ನು ಪಾಲಿಸುವ ಮೂಲಕ ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗಿದೆ ಎಂದು ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಸಲಹೆ ನೀಡಿದ್ದಾರೆ.
ಕುಶಾಲನಗರದ ಹಿಲಾಲ್ ಮದರಸ ಸಭಾಂಗಣದಲ್ಲಿ ಮಡಿಕೇರಿಯ ಬೀಬಿ ಫಾತಿಮಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮೈಸೂರಿನ ಅಲ್ ಅನ್ಸಾರ್ ಆಸ್ಪತ್ರೆ, ವಿರಾಜಪೇಟೆಯ ಕೊಡಗು ದಂತ ವೈದ್ಯ ಮಹಾವಿದ್ಯಾನಿಲಯ ಮತ್ತು ಮಂಗಳೂರಿನ ಯೇನಪೊಯ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳ ತಜ್ಞ ವೈದರುಗಳ ಸಹಯೋಗದೊಂದಿಗೆ ನಡೆದ ಬೃಹತ್ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒತ್ತಡದ ಜೀವನದಿಂದ ಆರೋಗ್ಯದಲ್ಲಿ ಏರುಪೇರಾಗುವುದು ಸಹಜವಾಗಿದ್ದು, ವೈದ್ಯರ ಸಲಹೆ ಪಾಲಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು. ಸೇವೆಯೇ ವೈದ್ಯರ ಪ್ರಮುಖ ಗುರಿಯಾಗಿದೆ, ವೈದ್ಯರು ಹಾಗೂ ರೋಗಿಗಳಿಗೆ ತಾಳ್ಮೆ ಮುಖ್ಯವಾಗಿದೆ. ಯಾವುದೇ ಸಂದರ್ಭ ಎದುರಾದರೂ ವೈದ್ಯರ ಮೇಲೆ ಹಲ್ಲೆ ಮಾಡುವ ಮನೋಭಾವನೆ ಬರಬಾರದು ಎಂದರು.
ಟ್ರಸ್ಟ್ ಅಧ್ಯಕ್ಷ ಅಫ್ರೋಜ್ ಮಹಮ್ಮದ್ ಖಾನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ, ಜಿಲ್ಲಾ ಆರೋಗ್ಯ ಅಧಿಕಾರಿಗಳಾದ ಡಾ.ಕೆ.ಎಂ.ಸತೀಶ್ ಕುಮಾರ್, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಕೆ.ಎಚ್.ಅಬ್ದುಲ್ ಮಜೀದ್, ಪತ್ರಕರ್ತ ಎಂ.ಈ.ಮಹಮ್ಮದ್, ವೈದ್ಯಾಧಿಕಾರಿಗಳಾದ ಡಾ.ಮಹಮ್ಮದ್ ಅಯಾಜ್, ಡಾ.ಆಯುಷ, ಡಾ.ಚೇತನ್ ಕುಮಾರ್, ಡಾ.ಶ್ರೀನಿವಾಸ್, ಡಾ. ಕರುಂಬಯ್ಯ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಶಿಬಿರದಲ್ಲಿ ದಂತ ತಪಾಸಣೆ, ನೇತ್ರ ತಪಾಸಣೆ, ಆರೋಗ್ಯ ಸಂಬಂಧಿ ಮಾಹಿತಿ ಹಂಚಿಕೆ ಮತ್ತು ರಕ್ತದಾನ ನಡೆಯಿತು.







