
ಮಡಿಕೇರಿ NEWS DESK ಜು.31 : ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬoಧಿಸಿದoತೆ ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು ಹಾಗೂ ಯುವ ಸಮೂಹದ ವಿರುದ್ಧ ಹೂಡಲಾಗಿರುವ ಎಫ್‌ಐಆರ್ ನ್ನು ತಕ್ಷಣ ರದ್ದುಗೊಳಿಸಬೇಕೆಂದು ಒತ್ತಾಯಿಸಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯ ನಗರದಲ್ಲಿ ಪ್ರತಿಭಟನೆ ನಡೆಸಿತು. ನಗರದ ಇಂದಿರಾ ಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಎಸ್‌ಡಿಪಿಐ ಪಕ್ಷದ ಪ್ರಮುಖರು ಹಾಗೂ ಸದಸ್ಯರು ಕೇಂದ್ರ ಸರಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ವಿದ್ಯಾರ್ಥಿಗಳು ಹಾಗೂ ಯುವ ಪೀಳಿಗೆ ಈ ದೇಶದ ಭವಿಷ್ಯವಾಗಿದ್ದು, ಅವರ ಮೇಲೆ ಹೂಡಲಾಗಿರುವ ಎಲ್ಲಾ ಕೇಸ್‌ಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಅವರು ಮಾತನಾಡಿ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬoಧಿಸಿದoತೆ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಗುಂಡು ಹಾರಿಸಿ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ಕೇಂದ್ರ ಸರಕಾರ ಮಾಡಿದೆ. ವಿದ್ಯಾರ್ಥಿಗಳ ಭವಿಷ್ಯದ ಆತಂಕಗಳನ್ನು ಕೇಂದ್ರ ಸರಕಾರ ಮನಗಾಣುವಲ್ಲಿ ವಿಫಲವಾಗಿದೆ. ದೇಶದಲ್ಲಿ ನಿರಂಕುಶ ಆಡಳಿತ ನಡೆಯುವುದನ್ನು ಯುವ ಸಮೂಹ ಪ್ರತಿಭಟನೆ ಮೂಲಕ ವಿರೋಧಿಸಿದೆ. ಇದನ್ನು ಸಹಿಸದ ಸರಕಾರ ಪ್ರತಿಭಟನಾಕಾರರ ಮೇಲೆ ಕೇಸ್ ದಾಖಲಿಸಿದೆ ಎಂದು ಆರೋಪಿಸಿದರು. ಪ್ರತಿಭಟನೆಯಲ್ಲಿ ಎಸ್‌ಡಿಪಿಐ ಪ್ರಮುಖರಾದ ಅಬ್ದುಲ್ ಅಡ್ಕಾರ್, ನಗರಸಭಾ ಸದಸ್ಯರಾದ ಎಂ.ಕೆ.ಮನ್ಸೂರ್ ಆಲಿ, ಮೇರಿ ವೇಗಸ್, ಪಕ್ಷದ ಪದಾಧಿಕಾರಿಗಳು ಹಾಗೂ ಎಸ್‌ಡಿಪಿಐ ವುಮೆನ್ಸ್ ಇಂಡಿಯಾ ಘಟಕದ ಪ್ರಮುಖರು ಪಾಲ್ಗೊಂಡಿದ್ದರು.









