ಮಡಿಕೇರಿ ಸೆ.16 : ವಿದ್ಯಾರ್ಥಿನಿಯರಿಗೆ ಶೇಕಡ 0.50 ರಷ್ಟು ರಿಯಾಯಿತಿ ದರದಲ್ಲಿ ಶೈಕ್ಷಣಿಕ ಸಾಲ ಒದಗಿಸಲಾಗುವುದು. ಆ ಮೂಲಕ ಅವರು ತಮ್ಮ ಉನ್ನತ ಶಿಕ್ಷಣದ ಕನಸನ್ನು ಈಡೇರಿಸಿಕೊಳ್ಳಬಹುದು ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕ್ ನ ಮುಖ್ಯ ವ್ಯವಸ್ಥಾಪಕ ಶೈಲೇಶ್ ಸುರೇಶ್ ನಾಯ್ಕ ಹೇಳಿದರು.
ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜ್ ನಲ್ಲಿ ನಡೆದ ಬ್ಯಾಂಕ್ ಸೌಲಭ್ಯಗಳ ಕುರಿತು ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದ ಅವರು ಬ್ಯಾಂಕಿಂಗ್ ಸಾಲ ಸೌಲಭ್ಯ, ವಿದೇಶಿ ವ್ಯಾಸಂಗಕ್ಕಾಗಿ ನಿಗದಿಪಡಿಸಿದ ಶೈಕ್ಷಣಿಕ ಸಾಲ, ಬ್ಯಾಂಕಿಂಗ್ ಸ್ಪಾಮ್, ಸೈಬರ್ ಸೆಕ್ಯುರಿಟಿಯನ್ನು ಮೀರಿ ಬೆಳೆಯುತ್ತಿರುವ ಸೈಬರ್ ಅಪರಾಧ, ಬ್ಯಾಂಕಿಂಗ ಫ್ರಾಡ್ ಗಳ ಕುರಿತು ತಿಳಿಸಿದರು.
ಪ್ರತೀ ತಿಂಗಳು 50 ರೂ.ಗಳನ್ನು ಖಾತೆಗೆ ಜಮಾ ಮಾಡುತ್ತಾ ಬಂದರೆ ನಿಮ್ಮ 60 ನೇ ವರ್ಷಕ್ಕೆ ಪಿಂಚಣಿಯ ರೂಪದಲ್ಲಿ ಆ ಹಣ ಯೋಜಿತ ನೆಲೆಯಲ್ಲಿ ಕೈ ಸೇರಲಿದೆ. ಅಲ್ಲದೆ ಶೂನ್ಯ ಮೊತ್ತದಲ್ಲಿ ನೀವು ತರೆದಿರುವ ವಿದ್ಯಾರ್ಥಿ ಖಾತೆಯನ್ನು ಉದ್ಯೋಗಿಗಳಾದ ಮೇಲೆ ಸಂಬಳದ ಖಾತೆಯಾಗಿ ಪರಿವರ್ತಿಸುವ ಅವಕಾಶ ಕಲ್ಪಿಸಲಾಗಿದೆ ಎಂದರು.
ಆರ್. ಡಿ, ಎಫ್ ಡಿ ಯಂತಹ ಹಣ ಉಳಿತಾಯ ಕ್ರಮಗಳ ಕಡೆಗೆ ವಿದ್ಯಾರ್ಥಿಗಳು ಹೆಚ್ಚು ಗಮನ ಹರಿಸಬೇಕು. ಜೀವನ ನಿರ್ವಹಣೆಯ ಜೊತೆಯಲ್ಲಿ ಅರ್ಥಿಕ ಸಬಲೀಕರಣಕ್ಕೆ ಬ್ಯಾಂಕಿಂಗ್ ವ್ಯವಸ್ಥೆ ಹೆಚ್ಚು ಪೂರಕವಾಗಿದೆ ಎಂದು ಹೇಳಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿದ ಎಸ್ ಬಿ ಐ ಅಧಿಕಾರಿಗಳಾದ ದೀಪ್ತಿ ಹಾಗೂ ಕೃತಿ ಬ್ಯಾಂಕಿಗ್ ಕ್ಷೇತ್ರದಲ್ಲಿನ ಔದ್ಯೋಗಿಕ ಅವಕಾಶಗಳು, ಐಬಿಪಿಎಸ್ ನಂತಹ ಬ್ಯಾಂಕಿಂಗ್ ಪರೀಕ್ಷೆಗಳ ತಯಾರಿಯ ಕುರಿತು ಸಮಗ್ರ ಮಾಹಿತಿಯನ್ನು ನೀಡಿದರು.
ಪ್ರಾಸ್ತವಿಕ ನುಡಿಗಳನ್ನಾಡಿ ಸ್ವಾಗತಿಸಿ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮೇಜರ್ ಪ್ರೊ. ರಾಘವ ಬಿ ಅವರು ವಿದ್ಯಾರ್ಥಿಗಳು ಇಂತಹ ಕಾರ್ಯಾಗಾರದ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲ ಸೌಲಭ್ಯಗಳನ್ನು ಪಡೆದು ವಿದೇಶದಲ್ಲಿ ವ್ಯಾಸಂಗ ಮಾಡಿ ನಮ್ಮ ದೇಶದ ಸಮಗ್ರ ಅರ್ಥಿಕತೆಗೆ ಕೊಡುಗೆಯನ್ನು ನೀಡಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿ ಸಂಘದ ಸಂಚಾಲಕರು ಹಾಗೂ ಹಿಂದಿ ವಿಭಾಗದ ಮುಖ್ಯಸ್ಥರಾದ ತಳವಾರ್ ಮಾತನಾಡಿ ದೇಶದ ಪ್ರಗತಿಗೆ ಪೂರಕವಾಗುವ ಆರ್ಥಿಕತೆಯನ್ನು ವಿದ್ಯಾರ್ಥಿ ದೆಸೆಯಿಂದಲೇ ರೂಪಿಸುವ ಕನಸು ಕಾಣಬೇಕು. ಹೊಸ ಬಗೆಯ ವೆಂಚರ್ ಗಳನ್ನು ಪ್ರಾರಂಭಿಸಲು ಬ್ಯಾಂಕಿಂಗ್ ವ್ಯವಸ್ಥೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು. 19 ಕರ್ನಾಟಕ ಬೆಟಾಲಿಯನ್ ನ ಸುಬೇದಾರ್ ಪ್ರವೀಣ್ ಕುಮಾರ್, ಬ್ಯಾಂಕ್ ಅಧಿಕಾರಿಗಳಾದ ಕೇಶವ ಗೌಡ, ಲಿಖಿತ್ ಹಾಗೂ ಕಾಲೇಜಿನ ಎನ್ ಸಿ ಸಿ ಸಂಚಾಲಕ ವಿಶಾಲ್ ಉಪಸ್ಥಿತರಿದ್ದರು.