ಕುಶಾಲನಗರ, ಸೆ.18: ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ರಾಷ್ಟ್ರೀಯ ಹಸಿರು ಪಡೆಯ ಇಕೋ ಕ್ಲಬ್ ವತಿಯಿಂದ “ಗ್ರೋ ಗ್ರೀನ್” ಅಭಿಯಾನದಡಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಜಿಲ್ಲಾ ಘಟಕದ ಆಶ್ರಯದಲ್ಲಿ ಪರಿಸರ ಸ್ನೇಹಿ ಗಣೇಶೋತ್ಸವ ನಡೆಯಿತು.
“ನಮ್ಮ ನಡಿಗೆ ಹಸಿರೆಡೆಗೆ “ಮಣ್ಣಿನ ಗಣೇಶ ಬಳಸಿ- ಜಲಮಾಲಿನ್ಯ ತಡೆಯಿರಿ” ಕುರಿತು ನಡೆದ ಪರಿಸರ ಜಾಗೃತಿ ಆಂದೋಲನದಲ್ಲಿ ವಿದ್ಯಾರ್ಥಿಗಳು ತಾವು ಸ್ವತಃ ತಯಾರಿಸಿದ ಪರಿಸರ ಸ್ನೇಹಿ ಗಣೇಶ ಮೂರ್ತಿಗಳ ಪ್ರದರ್ಶಿಸಿ ಗಮನ ಸೆಳೆದರು.
ಮಣ್ಣಿನ ಗಣೇಶ ಮೂರ್ತಿ ಬಳಕೆಯ ಮಹತ್ವ ಕುರಿತು ಮಾಹಿತಿ ನೀಡಿದ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಸಿ.ಎಂ.ಬಬಿತ ಮಾತನಾಡಿ, ರಾಸಾಯನಿಕ ಬಣ್ಣದ ಗಣೇಶ ಮೂರ್ತಿಗಳನ್ನು ತ್ಯಜಿಸಿ ಪರಿಸರ ಸ್ನೇಹಿ ಜೇಡಿಮಣ್ಣಿನ ಗಣೇಶ ಮೂರ್ತಿಗಳನ್ನು ಬಳಕೆ ಮಾಡಬೇಕು ಎಂದರು.
ಶಾಲಾ ಮುಖ್ಯೋಪಾಧ್ಯಾಯ ಎಚ್.ಎಂ.ವೆಂಕಟೇಶ್ ಮಾತನಾಡಿ, ನಾವು ಮಾಲಿನ್ಯ ರಹಿತ ಹಬ್ಬದ ಆಚರಣೆ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಶಿಕ್ಷಕರಾದ ಸಿಎಸ್ ಜಾನಕಿ, ಎಚ್. ಈ.ರಮೇಶ್, ಪವಿತ್ರ, ಪುಷ್ಪಾವತಿ ಭಾಗ್ಯ ಮತ್ತು ಶಾಲಾ ಮಕ್ಕಳು
ಹಾಜರಿದ್ದರು.
ವಿದ್ಯಾರ್ಥಿಗಳು ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆ ಕುರಿತಾದ ಭಿತ್ತಿಫಲಕಗಳನ್ನು ಹಿಡಿದು ಗ್ರಾಮಸ್ಥರಲ್ಲಿ ಜನಜಾಗೃತಿ ಮೂಡಿಸಿದರು.








