ಕುಶಾಲನಗರ, ಸೆ.18 : ಕುಶಾಲನಗರ ತಾಲ್ಲೂಕಿನ ತೊರೆನೂರು ಸರ್ಕಾರಿ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್ ವತಿಯಿಂದ ಗ್ರೋ ಗ್ರೀನ್ ಅಭಿಯಾನದಡಿ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಘಟಕ ಹಾಗೂ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ಏರ್ಪಡಿಸಿದ್ದ ಪರಿಸರ ಸ್ನೇಹಿ ಗಣೇಶೋತ್ಸವದಲ್ಲಿ ಪಿ.ಓ.ಪಿ. ಹಾಗೂ ರಾಸಾಯನಿಕ ಬಣ್ಣದ ಗಣೇಶ ಮೂರ್ತಿಗಳನ್ನು ತ್ಯಜಿಸಿ ಪರಿಸರ ಸ್ನೇಹಿ ಜೇಡಿಮಣ್ಣಿನ ಗಣೇಶ ಮೂರ್ತಿಗಳನ್ನು ಬಳಕೆ ಮಾಡಬೇಕು ಎಂದು ವಿದ್ಯಾರ್ಥಿಗಳು ಪರಿಸರ ಜಾಗೃತಿ ಮೂಡಿಸಿದರು.
ಶಾಲಾ ಮುಖ್ಯೋಪಾಧ್ಯಾಯ ಬಿ.ಆರ್.ಸತ್ಯನಾರಾಯಣ ಮಾತನಾಡಿ, ನಾವು ಮಾಲಿನ್ಯ ರಹಿತ ಹಬ್ಬದ ಆಚರಣೆಗಳಿಗೆ ಒತ್ತು ನೀಡುವ ಮೂಲಕ ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದರು.
ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ರೂಪಾ ಮಹೇಶ್ ಮಾತನಾಡಿ, ವಿದ್ಯಾರ್ಥಿಗಳು ಜನರಲ್ಲಿ ಮಣ್ಣಿನ ಮೂರ್ತಿ ಬಳಕೆ ಕುರಿತು ಜಾಗೃತಿ ಮಾಡಿಸಬೇಕು ಎಂದರು.
ಶಾಲೆಯ ಇಕೋ ಕ್ಲಬ್ ನ ಉಸ್ತುವಾರಿ ಶಿಕ್ಷಕಿ ಬಿ.ಪಿ.ಸವಿತಾ , ಪರಿಸರ ಸ್ನೇಹಿ ಗಣೇಶೋತ್ಸವ ಆಚರಣೆಯ ಮಹತ್ವ ತಿಳಿಸಿದರು.
ಶಿಕ್ಷಕರಾದ ಟಿ.ಬಿ.ಮಂಜುನಾಥ್, ದಿವ್ಯ, ಜಿ.ಶ್ರೀಹರ್ಷ, ಎಸ್.ಕೆ.ಶೈಲಾ, ಎಸ್ ಡಿ ಎಂ.ಸಿ.ಸದಸ್ಯರಾದ ಜಗದೀಶ್, ಗಣೇಶ್,ಗಿರೀಶ್, ಮಂಜುಳಾ, ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು, ಸ್ಥಳೀಯರು ಇದ್ದರು.
ಮಕ್ಕಳು ತಾವು ಜೇಡಿಮಣ್ಣಿನಿಂದ ತಯಾರಿಸಿದ ಗಣೇಶ ಮೂರ್ತಿಗಳನ್ನು ಪ್ರದರ್ಶಿಸಿ ಜನಜಾಗೃತಿ ಮೂಡಿಸಿದರು.
ವಿದ್ಯಾರ್ಥಿಗಳು ಬಣ್ಣದ ಗಣೇಶ ತ್ಯಜಿಸಿ, ಪರಿಸರ ಸಂರಕ್ಷಿಸಿ, ಮಣ್ಣಿನ ಗಣಪ ಬಳಸಿ-
ಜಲಮಾಲಿನ್ಯ ತಡೆಯಿರಿ ಎಂಬಿತ್ಯಾದಿ ಘೋಷಣೆಗಳನ್ನು ಕೂಗಿ ಜನರ ಗಮನ ಸೆಳೆದರು.








