ನಾಪೋಕ್ಲು ಸೆ.18 : ಮುಸ್ಲಿಂ ವಿವಿಧ ಸಂಘಟನೆಗಳ ವತಿಯಿಂದ ಮಿಲಾದ್ ಸಂದೇಶ ರ‍್ಯಾಲಿ ನಾಪೋಕ್ಲು ಪಟ್ಟಣದಲ್ಲಿ ನಡೆಯಿತು.
ಹಳೆ ತಾಲೂಕಿನಿಂದ ಸಂತೆ ಮೈದಾನದವರೆಗೆ ಮೆರವಣಿಗೆಯಲ್ಲಿ ಸಾಗಿದ ಮುಸ್ಲಿಂ ಬಾಂಧವರು ಶಾಂತಿಯ ಸಂದೇಶ ಸಾರಿದರು.
ಈ ಸಂದರ್ಭ ಸಂತೆ ಮೈದಾನದಲ್ಲಿ ಆಯೋಜಿಸಿದ ಸಭಾ ಕಾರ್ಯಕ್ರಮದಲ್ಲಿ ಕರ್ನಾಟಕ ಎಸ್.ಎಸ್.ಎಫ್ ರಾಜ್ಯಾಧ್ಯಕ್ಷ ಹಫೀಜ್ ಸುಫ್ಯಾನ್ ಸಖಾಫಿ ಪಾಲ್ಗೊಂಡು ಮಾತನಾಡಿ, ಸಮಾಜದಲ್ಲಿ ಪರಸ್ಪರ ಗುರುತಿಸಿಕೊಂಡು ಗೌರವಯುತವಾದ ಬದುಕು ಸಾಗಿಸಬೇಕು ಎಂದರು.
ಮುಸಲ್ಮಾನರು ಪವಿತ್ರ ಖುರಾನ್ ಉಓದುವುದರ ಮೂಲಕ ಜೀವನವನ್ನು ಸಾರ್ಥಕ ಪಡಿಸಬೇಕಾಗಿದೆ. ಮಸೀದಿಯಲ್ಲಿ ಜನರ ನಡುವೆ ತಾರತಮ್ಯ ಇರಬಾರದು ಪ್ರವಾದಿ ಮಹಮ್ಮದ್ ಪೈಗಂಬರ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮೌಲ್ಯಯುತ ಜೀವನ ಸಾಗಿಸಬೇಕು ಎಂದರು.
ಕರ್ನಾಟಕ ಮುಸ್ಲಿಂ ಜಮಾಅತ್ ಕೊಡಗು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹಾಜಿ ಕುಂಜಿಲ ಮಾತನಾಡಿ, ಕರ್ನಾಟಕ ಮುಸ್ಲಿಂ ಜಮಾಯತ್, ಎಸ್.ಎಸ್.ಎಫ್ ಮರ್ಕಾಝ್ ಹಿದಾಯ ಕೊಟ್ಟಮುಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಮಿಲಾದ್ ಸಂದೇಶ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ. ಪ್ರವಾದಿಯ ಶಾಂತಿ ಸಂದೇಶವನ್ನು ಎಲ್ಲೆಡೆ ಹರಡುವುದು ರ‍್ಯಾಲಿಯ ಉದ್ದೇಶ ಎಂದರು.
ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹಾಜಿ ಕೊಳಕೇರಿ, ವಲಯ ಅಧ್ಯಕ್ಷ ಅಬ್ದುಲ್ ಸಖಾಫಿ, ಜಿಲ್ಲಾ ಕೋಶಾಧಿಕಾರಿ ಹುಸೇನ್ ಸಖಾಫಿ ಎಮ್ಮೆಮಾಡು, ನಾಪೋಕ್ಲು ವಲಯದ ಎಸ್.ಜೆ.ಎಂ, ಕೆ.ಎಂ.ಜೆ, ಎಸ್.ವೈ.ಎಸ್, ಎಸ್.ಎಸ್.ಎಫ್, ಎಸ್.ಬಿ.ಎಸ್, ಮಾರ್ಕಜ್, ವಿವಿಧ ಮಸೀದಿಯ ಧರ್ಮ ಗುರುಗಳು ಹಾಗೂ ಜಮಾಯತ್, ಮದರಸಗಳ ಪದಾಧಿಕಾರಿಗಳು ,ಶಿಕ್ಷಕರು, ವಿದ್ಯಾರ್ಥಿಗಳು, ಜನಾಂಗಬಾಂಧವರು ಪಾಲ್ಗೊಂಡಿದ್ದರು.
ಮಿಲಾದ್ ಸಂದೇಶ ರ‍್ಯಾಲಿಯಲ್ಲಿ ಮದರಸ ವಿದ್ಯಾರ್ಥಿಗಳಿಂದ ಏರ್ಪಡಿಸಲಾದ ದಫ್ ಪ್ರದರ್ಶನ ಗಮನ ಸೆಳೆಯಿತು.
ವರದಿ : ದುಗ್ಗಳ ಸದಾನಂದ









