ಮಡಿಕೇರಿ ಸೆ.18 : ಪಠ್ಯ ಚಟುವಟಿಕೆಗಳ ಜೊತೆಗೆ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಹೊರತರಲು ಮತ್ತು ಪ್ರತಿಭೆಗಳ ಬೆಳವಣಿಗೆಗೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆಯಾಗಿದೆ ಎಂದು ವಿರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪ್ರಕಾಶ್ ಅಭಿಪ್ರಾಯಪಟ್ಟರು
ಅಮ್ಮತ್ತಿ ಒಂಟಿಯಂಗಡಿ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಲೋತ್ಸವ ಕಾರ್ಯಕ್ರಮವನ್ನು ದೀಪಾಕಾರದ ಪುಷ್ಪ ರಂಗೋಲಿಗೆ ಸ್ಪರ್ಶ ನೀಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಸಂಪನ್ಮೂಲ ಸಮನ್ವಯಾಧಿಕಾರಿ ವನಜಾಕ್ಷಿ ಮಾತನಾಡಿ, ಮಕ್ಕಳಲ್ಲಿ ಎಲೆಮರೆ ಕಾಯಿಯಂತೆ ಅಡಗಿರುವ ಪ್ರತಿಭೆಯನ್ನು ಗುರುತಿಸಿ ತಾಲೂಕು, ಜಿಲ್ಲೆ, ರಾಜ್ಯ ಹಂತಕ್ಕೆ ಕಳುಹಿಸುವ ಇಲಾಖೆಯ ಪ್ರಯತ್ನಕ್ಕೆ ಕ್ಲಸ್ಟರ್ ಗಳು ಕೂಡ ಸಾಥ್ ನೀಡ್ತಾ ಇದ್ದಾರೆ. ತಾಲೂಕು ಮಟ್ಟದಲ್ಲಿ ತಮ್ಮ ಪ್ರತಿಭೆಗಳ ಮೂಲಕ ಗಮನ ಸೆಳೆದಿರುವ ಮಕ್ಕಳು ವಿಜೇತರಾಗಿ ಜಿಲ್ಲೆ ಹಾಗೂ ರಾಜ್ಯಮಟ್ಟದಲ್ಲೂ ಸಾಧನೆ ಮಾಡಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಛದ್ಮವೇಷ, ಆಸುಭಾಷಣ, ಚರ್ಚಾ ಸ್ಪರ್ಧೆ, ರಸಪ್ರಶ್ನೆ, ಕ್ಲೆ ಮಾಡ್ಲಿಂಗ್, ಮಿಮಿಕ್ರಿ, ಭಾವಗೀತೆ, ರಂಗೋಲಿ ಸೇರಿದಂತೆ ವಿವಿಧ ಬಗೆಯ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಪಾಲ್ಗೊಂಡ ವಿದ್ಯಾರ್ಥಿಗಳು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇದೇ ಸಂದರ್ಭ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಗಮನ ಸೆಳೆದ ಛದ್ಮವೇಷ : ಪ್ರತಿಭಾ ಕಲೋತ್ಸವ ಅಂಗವಾಗಿ ವಿವಿಧ ಶಾಲೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ , ಪ್ರಕೃತಿ ಉಳಿಸಿ, ರಸ್ತೆ ಅಪಘಾತಗಳ ಕುರಿತ ಸೂಚನಾ ಫಲಕ, ಚಂದ್ರಯಾನ, ಭದ್ರಕಾಳಿ, ಮಹಾಲಕ್ಷ್ಮಿ, ಅಸ್ಟ್ರಿಜ್ ಪಕ್ಷಿ, ಜಲಕನ್ಯೆ, ಸಂಗೊಳ್ಳಿ ರಾಯಣ್ಣ, ಮಹಾತ್ಮ ಗಾಂಧಿ, ಸ್ವಾಮಿ ವಿವೇಕಾನಂದ, ಭಾರತದ ರಾಷ್ಟ್ರೀಯ ಚಿಹ್ನೆಗಳು, ತಂಬಾಕು ಸೇವನೆ ಬಗ್ಗೆ ಜಾಗೃತಿ ಫಲಕ , ಕಾಳಿಮಾತೆ, ಶ್ರೀಕೃಷ್ಣ, ಸ್ಪೈಡರ್, ನ್ಯಾಯ ದೇವತೆ, ನೇಗಿಲ ಯೋಗಿ ಹೀಗೆ ವಿವಿಧ ವೇಷಗಳನ್ನು ಪ್ರದರ್ಶಿಸುವ ಮೂಲಕ ಎಲ್ಲರ ಗಮನ ಸೆಳೆದರು.
ಕಾರ್ಯಕ್ರಮದಲ್ಲಿ ಬಿಐಆರ್ಟಿ ಅಜಿತಾ, ಬಿ ಆರ್ಪಿ ವಾಮನ, ಸಿ ಆರ್ ಪಿ ಸುಷಾ, ಎಸ್ಡಿಎಂಸಿ ಅಧ್ಯಕ್ಷೆ ರಾಜೇಶ್ವರಿ, ಅಮ್ಮತಿ ಒಂಟಿಯಂಗಡಿ ಶಾಲೆಯ ಮುಖ್ಯ ಶಿಕ್ಷಕಿ ಮಿನ್ನಮ್ಮ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ವಿವಿಧ ಶಾಲೆಗಳ ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಒಂಟಿಯಂಗಡಿ ಶಾಲೆಯ ಶಿಕ್ಷಕಿ ಎನ್. ಪಿ. ಲೀಲಾವತಿ ಕಾರ್ಯಕ್ರಮ ನಿರೂಪಿಸಿ ಕೊಂಡಂಗೆರಿ ಶಾಲೆಯ ಮುಖ್ಯ ಶಿಕ್ಷಕರು ರವಿಕುಮಾರ್ ವಂದಿಸಿದರು.










