ಸುಂಟಿಕೊಪ್ಪ ಸೆ.18 : ಮೊಗೇರ ಸೇವಾ ಸಮಾಜದ ಸದಸ್ಯರುಗಳು ಎಷ್ಟೇ ಕಷ್ಟ ಬಂದರೂ ಮಕ್ಕಳಿಗೆ ಉನ್ನತ ವಿದ್ಯಾಭ್ಯಾಸ ಕಲ್ಪಿಸಿ ಕೊಡುವುದರ ಮೂಲಕ ಸಮಾಜ ಬಲಿಷ್ಠವಾಗಲು ಸಹಕರಿಸಬೇಕು ಎಂದು ಕೊಡಗು ಜಿಲ್ಲಾ ಮೊಗೇರ ಸಮಾಜದ ಸ್ಥಾಪಕ ಅಧ್ಯಕ್ಷ, ನಿವೃತ್ತ ಶಿಕ್ಷಕ ಟಿ.ಸದಾನಂದ ಕರೆ ನೀಡಿದರು.
ಸುಂಟಿಕೊಪ್ಪದ ಗುಂಡುಗುಟ್ಟಿ ಶ್ರೀ ಮಂಜನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ನಡೆದ ಮೊಗೇರ ಗ್ರಾಮ ವಿಕಾಸ ಯೋಜನೆಯ ಪ್ರಥಮ ವರ್ಷದ ವಾರ್ಷಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
20 ವರ್ಷಗಳ ಹಿಂದೆ ಕೊಡಗಿನಲ್ಲಿ ಮೊಗೇರ ಸಮಾಜ ಸ್ಥಾಪಿಸುವಾಗ ಅನೇಕ ಸವಾಲುಗಳು ಇದ್ದವು, ಆಗ ಗ್ರಾಮ ಪಂಚಾಯಿತಿ, ತಾ.ಪಂ, ಜಿ.ಪಂ ನಲ್ಲೂ ಒಬ್ಬರೇ ಒಬ್ಬರು ಸಮಾಜದ ಸದಸ್ಯರುಗಳು ಇರಲಿಲ್ಲ. ನಂತರ ಸಂಘಟನೆ ಬಲವಾದಂತೆ ಹಲವಾರು ಮಂದಿ ಗ್ರಾ.ಪಂ, ತಾ.ಪಂ., ಜಿ.ಪಂ. ಸದಸ್ಯರು ಅಧ್ಯಕ್ಷರುಗಳಾಗಿ ಗುರುತಿಸಿಕೊಳ್ಳುತ್ತಿದ್ದು, ಶಿಕ್ಷಣ ಸಹಬಾಳ್ವೆ, ಸಹಕಾರ ನೆಮ್ಮದಿ ನಮ್ಮ ಸಿದ್ದಾಂತವಾದರೂ ಸೇವಾ ಯೋಜನೆಯಿಂದ ಸಂಘದ ಅಭಿವೃದ್ಧಿ ಸಾಧ್ಯವಾಗಲಿದೆ ಎಂದರು.
ನಮ್ಮ ಸಮಾಜದ ಮಕ್ಕಳು ಐಎಎಸ್, ಐಪಿಎಸ್, ಇಂಜಿನೀಯರ್ ಆಗಿ ಹೊರಬರಬೇಕು ಎಂದು ಕರೆ ನೀಡಿದರು.
ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಪಿ.ಬಿ.ಜನಾರ್ಧನ ಮಾತನಾಡಿ, 20 ವರ್ಷದ ಪರಿಶ್ರಮದ ಫಲವಾಗಿ ಮೊಗೇರ ಸಮಾಜ ಸಂಘಟನಾತ್ಮಕವಾಗಿ ಬೆಳೆಯುತ್ತಾ ಬರುತ್ತಿದೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಗೆ ಶಿಕ್ಷಣ ಆರೋಗ್ಯ ಹಾಗೂ ಸೂರು ನೀಡುವತ್ತ ಮೊಗೇರ ಗ್ರಾಮ ವಿಕಾಸ ಯೋಜನೆ ದೃಡಕಲ್ಪಿತ ಮಾಡಿ ಎಂದು ಹೇಳಿದರು.
ತುಳು ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಪಿ.ಎಂ.ರವಿ ಮಾತನಾಡಿ, ಮೊಗೇರ ಸಮಾಜಕ್ಕೆ ತನ್ನದೇಯಾದ ಸಂಸ್ಕೃತಿ, ಆಚಾರ, ವಿಚಾರಗಳಿಗೆ ಕೊಡಗಿನಲ್ಲಿ 35,000 ಮಂದಿ ಸಮಾಜ ಬಾಂಧವರು ನೆಲೆಸಿದ್ದಾರೆ. ಅವರ ಆರ್ಥಿಕ ಸ್ಥಿತಿಗತಿ ಸುಧಾರಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕೊಡಗಿನಲ್ಲಿ ತುಳು ಸಂಸ್ಕೃತಿಯ ದೈವರಾಧಕರು ನೆಲೆಸಿದ್ದಾರೆ. ಶೈಕ್ಷಣಿಕವಾಗಿ ಮುಂದೆ ಬರಲು ಪೋಷಕರು ಶ್ರಮಿಸಬೇಕು ಎಂದು ಹೇಳಿದರು.
ಮಾಜಿ ಜಿ.ಪಂ.ಅಧ್ಯಕ್ಷ, ರಾಜ್ಯ ಮೊಗೇರ ಸಮಾಜದ ಉಪಾಧ್ಯಕ್ಷ ಬಿ.ಶಿವಪ್ಪ ಮಾತನಾಡಿ, ಸಮಾಜದ ಅಭಿವೃದ್ಧಿಗೆ ಗ್ರಾಮ ವಿಕಾಸ ಯೋಜನೆ ಸ್ಥಾಪಿಸಲಾಗಿದೆ. ಸ್ವಾಭಿಮಾನದಿಂದ ಬದುಕುವ ಬಾಂಧವರಿಗೆ ಸೂರು ಕಲ್ಪಿಸುವ ಕೆಲಸ ಆಗಬೇಕೆಂದರು.
ಮೊಗೇರ ಗ್ರಾಮ ವಿಕಾಸ ಯೋಜನೆಯಿಂದ ಮೊಗೇರ ಸೌಹಾರ್ದ ಸಹಕಾರ ಸಂಘ ಸ್ಥಾಪಿಸುವ ಗುರಿ ಇದೆ ಎಂದು ಸಂಚಾಲಕ ಸುರೇಶ್ ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಮೊಗೇರ ಗ್ರಾಮ ವಿಕಾಸ ಯೋಜನೆ ಅಧ್ಯಕ್ಷ ಗೌತಮ್ ಶಿವಪ್ಪ ಮಾತನಾಡಿದರು.
ಮಾಜಿ ಜಿ.ಪಂ.ಅಧ್ಯಕ್ಷ, ರಾಜ್ಯ ಮೊಗೇರ ಸಮಾಜದ ಉಪಾಧ್ಯಕ್ಷ ಬಿ.ಶಿವಪ್ಪ ಮಾತನಾಡಿ, ಮೊಗೇರ ಗ್ರಾಮ ವಿಕಾಸ ಯೋಜನೆಯ ಲಾಂಛನವನ್ನು ಅನಾವರಣಗೊಳಿಸಿದರು.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಮುದ್ದಕಳಲ ಯುವಕ ಸಂಘದ ಅಧ್ಯಕ್ಷ ಜ್ಯೋತಿಕುಮಾರ್, ಶಾಂತಳ್ಳಿ ಉಪತಹಶೀಲ್ದಾರ್ ತುಕ್ರಪ್ಪ, ಸೋಮವಾರಪೇಟೆ ವೈಲ್ಡ್‍ಲೈಫ್ ಡಿ.ಆರ್.ಎಫ್.ಓ.ಪಿ.ಟಿ.ಶಶಿ, ಕೆನಾರಬ್ಯಾಂಕ್ ಉದ್ಯೋಗಿ ಶೇಷಪ್ಪ ಲೋಕಯ್ಯ, ಮೊಗೇರ ಸೇವಾ ಸಮಾಜದ ಸ್ಥಾಪಕ ಸದಸ್ಯ ಲೋಹಿತ್, ಗ್ರಾ.ಪಂ.ಸದಸ್ಯ ಸೋಮನಾಥ್, ಗ್ರಾಮ ವಿಕಸ ಯೋಜನೆ ಉಪಾಧ್ಯಕ್ಷ ಎಂ.ಪಿ.ದೇವಪ್ಪ, ಗ್ರಾಮ ವಿಕಾಸ ಯೋಜನೆ ಖಜಾಂಜಿ ಪಿ.ಜಿ.ಗಣೇಶ, ಜಿಲ್ಲಾ ಸಮಿತಿ ಸದಸ್ಯೆ ಚಂದ್ರಾವತಿ ಹಾಜರಿದ್ದರು.
ಸಭಾ ಕಾರ್ಯಕ್ರಮದ ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.