ನಾಪೋಕ್ಲು ಸೆ.18 : ಗೌರಿ ಗಣೇಶೋತ್ಸವಕ್ಕೆ ಜಿಲ್ಲೆ ಸಜ್ಜಾಗುತ್ತಿರುವಂತೆ ನಾಪೋಕ್ಲುವಿನಲ್ಲೂ ಉತ್ಸವದ ಸಂಭ್ರಮ ಗರಿಗೆದರಿದೆ.
ನಾಪೋಕ್ಲು ಪಟ್ಟಣದ ಐದು ದೇವಾಲಯಗಳಲ್ಲಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲು ಸಿದ್ಧತೆಗಳಾಗುತ್ತಿವೆ. ಐದು ವಿವಿಧ ದೇವಾಲಯಗಳ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಿ ಒಂದು ವಾರಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬಳಿಕ ಕಾವೇರಿ ನದಿಯಲ್ಲಿ ಪ್ರತಿಷ್ಠಾಪಿಸಿದ ಮೂರ್ತಿಗಳನ್ನು ವಿಸರ್ಜಿಸಲಾಗುತ್ತಿದೆ.
ನಾಪೋಕ್ಲುವಿನ ಕಕ್ಕುಂದ ಕಾಡಿನ ವೆಂಕಟರಮಣ ದೇವಾಲಯದ ಗಣಪತಿ ಸೇವಾ ಸಮಿತಿ ವತಿಯಿಂದ 18ನೇ ವರ್ಷದ ಗೌರಿ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುವುದು. ಗೌರಿ ಗಣೇಶೋತ್ಸವದ ಅಂಗವಾಗಿ ಸೆ.19 ರಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಹೋಮ, ಬಳಿಕ ಗೌರಿ ಗಣಪತಿ ಪ್ರತಿಷ್ಠಾಪನೆ ನಡೆಯಲಿದೆ.
ಸೆ.20 ರಿಂದ 23ರ ವರೆಗೆ ಐದು ದಿನಗಳ ಕಾಲ ದೇವಾಲಯದಲ್ಲಿ ನಿತ್ಯ ಪೂಜೆ ಮಹಾಪೂಜೆ, ಮಂಗಳಾರತಿ ಪ್ರಸಾದ ವಿತರಣೆ ಮತ್ತು ಅನ್ನದಾನ ನಡೆಯಲಿದೆ.
ಸೆ.20ರಂದು ರವಿ ಓಂಕಾರ ತಂಡದಿಂದ ಸಂಗೀತ ಕಾರ್ಯಕ್ರಮ, ಸೆ.21ರಂದು ಸಮುದಾಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸೆ.22ರಂದು ಬೆಳಿಗ್ಗೆ ಹತ್ತು ಗಂಟೆಯಿಂದ ಕೆಸರು ಗದ್ದೆ ಕ್ರೀಡಾಕೂಟ, ಹಗ್ಗ ಜಗ್ಗಾಟ, ಕಬ್ಬಡಿ ಹಾಗೂ ವಿವಿಧ ಕ್ರೀಡಾಕೂಟ ನಡೆಯಲಿದೆ.
ಸೆ.23 ರಂದು ಮಹಾ ಪೂಜೆಯ ಬಳಿಕ ಅಪರಾಹ್ನ ಒಂದು ಗಂಟೆಗೆ ಅನ್ನದಾನ ನಡೆಯಲಿದೆ. ಬಳಿಕ ಸುಳ್ಯದ ನಾಸಿಕ್ ಬ್ಯಾಂಡ್ ಮತ್ತು ಚಂಡೆ ಮೇಳದೊಂದಿಗೆ ಪಟ್ಟಣದಲ್ಲಿ ಅಲಂಕೃತ ಮಂಟಪ ದೊಂದಿಗೆ ಮೆರವಣಿಗೆಯಲ್ಲಿ ಸಾಗಿ ಉತ್ಸವ ಮೂರ್ತಿಯನ್ನು ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುವುದು ಎಂದು ಕಕ್ಕುಂದಕಾಡಿನ ಗಣಪತಿ ಸೇವಾ ಸಮಿತಿ ಆಡಳಿತ ಮಂಡಳಿ ಸದಸ್ಯರು ತಿಳಿಸಿದರು.
ಇಂದಿರಾನಗರದ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ 18ನೇ ವರ್ಷದ ಅದ್ದೂರಿ ಗೌರಿ ಗಣೇಶ ಉತ್ಸವ ಆಚರಿಸಲಾಗುವುದು.ಇಂದಿರಾನಗರದಲ್ಲಿ ಸೆ.19 ರಂದು 9.30 ಗಂಟೆಗೆ ಗಣಪತಿ ಹೋಮದೊಂದಿಗೆ ಗೌರಿ ಗಣೇಶ ಉತ್ಸವ ಮೂರ್ತಿಯ ಪ್ರತಿಷ್ಠಾಪನೆ ಮಾಡಲಾಗುವುದು. ನಂತರ ಐದು ದಿನಗಳ ಕಾಲ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಪೂಜಾ ಕಾರ್ಯಕ್ರಮ ನಡೆಯಲಿದೆ. ಇಪ್ಪತ್ತರಂದು ಸಂಜೆ 7 ಗಂಟೆಗೆ ಸ್ಥಳೀಯರಿಂದ ಹಾಡುಗಾರಿಕೆ, 21 ರಂದು ಸಂಜೆ 7 ಗಂಟೆಗೆ ರವಿ ಬಳಗದಿಂದ ಸಂಗೀತ ಸಂಜೆ, 22 ರಂದು ಸಂಜೆ 7 ಗಂಟೆಗೆ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದ್ದು, 23 ರಂದು ಮಧ್ಯಾಹ್ನ 12:30 ಗಂಟೆಗೆ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿದೆ.
ಬಳಿಕ ಭವ್ಯ ಅಲಂಕೃತ ಮಂಟಪದಲ್ಲಿ ಗಣೇಶ ಮೂರ್ತಿಯನ್ನು ಕೊಂಡೊಯ್ದು ಪವಿತ್ರ ಕಾವೇರಿ ನದಿಯಲ್ಲಿ ಸಂಜೆ 7 ಗಂಟೆಗೆ ಉತ್ಸವ ಮೂರ್ತಿಯನ್ನು ವಿಸರ್ಜಿಸಲಾಗುವುದು ಎಂದು ಗಣೇಶೋತ್ಸವ ಸೇವಾ ಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.