ಮಡಿಕೇರಿ ಸೆ.19 : ನಾಡಿನಲ್ಲಿ ಗಣೇಶೋತ್ಸವದ ಸಡಗರ ಮನೆ ಮಾಡಿದೆ. ವಿಘ್ನ ನಿವಾರಕ ವಿನಾಯಕನ ಸ್ಮರಣೆ ಕೊಡಗಿನಲ್ಲೂ ಜೋರಾಗಿದೆ. ಮಂಜಿನ ನಗರಿ ಮಡಿಕೇರಿಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿದೆ. ಮಡಿಕೇರಿ ನಗರದ ವಿವಿಧ ಬಡಾವಣೆಗಳಲ್ಲಿ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ಮಾಡಲಾಗಿದೆ. ಪುಟಾಣಿ ನಗರದ ಉದ್ಭವ ವಿನಾಯಕ ಸೇವಾ ಸಮಿತಿಯ ಸದಸ್ಯರು ಶಿವ ಪಾರ್ವತಿಯರ ಕೈಯಲ್ಲಿ ಮೂಡಿದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ನೇರವೇರಿಸಿದ್ದಾರೆ. ಐದು ದಿನಗಳ ಕಾಲ ಸ್ಥಳೀಯ ನಿವಾಸಿಗಳಿಂದ ಗಣಪತಿ ಮೂರ್ತಿಗೆ ಸಂಕಲ್ಪ ಪೂಜೆಗಳು ನಡೆಯಲಿದೆ. ಕೆಲವು ವರ್ಷಗಳ ಹಿಂದೆ ಕೇವಲ ಬೆರಳೆಣಿಕೆಯಷ್ಟು ಸದಸ್ಯರನ್ನು ಹೊಂದಿದ್ದ ಸೇವಾ ಸಮಿತಿ ಗಣೇಶೋತ್ಸವವನ್ನು ಆಚರಿಸಲು ಶ್ರಮ ವಹಿಸುತ್ತಿತ್ತು. ಇಂದು ಸದಸ್ಯರ ಸಂಖ್ಯೆ ಹೆಚ್ಚಾಗಿದ್ದು, ಸ್ವಂತ ಕಟ್ಟಡವನ್ನು ಕೂಡ ಹೊಂದಿ ಇಲ್ಲೇ ಗಣೇಶಮೂರ್ತಿ ಪ್ರತಿಷ್ಠಾಪಿಸಲಾಗುತ್ತಿದೆ. ಹಿಂದೂ, ಮುಸ್ಲಿಂ, ಕ್ರೈಸ್ತರೆನ್ನುವ ಬೇಧಭಾವವಿಲ್ಲದೆ ಇಲ್ಲಿರುವ ಎಲ್ಲರೂ ಗಣೇಶನ ಅರಾಧಾನೆಯಲ್ಲಿ ತೋಡಗಿಸಿಕೊಂಡಿದ್ದಾರೆ. ವಿವಿಧತೆಯಲ್ಲಿ ಏಕತೆ ಎನ್ನುವ ಸಂದೇಶವನ್ನು ಸಾರುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟಿನಲ್ಲಿ ಉದ್ಭವ ವಿನಾಯಕ ಸೇವಾ ಸಮಿತಿಯ ಸದಸ್ಯರು ಇತರರಿಗೆ ಮಾದರಿಯಾಗಿದ್ದಾರೆ.











